ಆಸೆ, ಆಮಿಷಗಳಿಗೆ ಮರುಳಾಗದೆ ಮತದಾನ ಮಾಡಿ: ಲೋಕೇಶ್ ಮೂರ್ತಿ

| Published : Apr 17 2024, 01:18 AM IST

ಆಸೆ, ಆಮಿಷಗಳಿಗೆ ಮರುಳಾಗದೆ ಮತದಾನ ಮಾಡಿ: ಲೋಕೇಶ್ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಸಮುದಾಯದ ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿದ್ದು ಜಾತಿ, ಮತ ಹಣದ ಆಮಿಷವಿಲ್ಲದೆ ಮತ ಚಲಾವಣೆ ಮಾಡುವ ಮೂಲಕ ದೇಶದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪ್ರಜೆಗಳ ಆಶಯಕ್ಕೆ ನಡೆದುಕೊಳ್ಳದ ಸರ್ಕಾರವನ್ನು ಬದಲಿಸುವ ಹಕ್ಕು ಮತದಾರರಿಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಯಾವುದೇ ಆಸೆ ಆಮಿಷಗಳಿಗೆ ಮರುಳಾಗದೆ ಮತದಾನ ಮಾಡುವ ಮೂಲಕ ಭಾರತದ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕು ಎಂದು ಪಾಂಡವಪುರ ತಾಪಂ ಇಒ ಲೋಕೇಶಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮೇಲುಕೋಟೆಯ ಎಸ್.ಇ.ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆ ಜಾಗೃತಿಯ ಸ್ವೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಏ.26ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ. ಮತದಾನ ಮಾಡಲು ಅನುಕೂಲವಾಗುವಂತೆ ಕಾಲೇಜು ಮತ್ತು ಕಚೇರಿಗಳಿಗೆ ರಜೆ ನೀಡಲಾಗುತ್ತಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ನಿಮ್ಮ ಮತಗಟ್ಟೆಗಳಿಗೆ ತೆರಳಿ ತಪ್ಪದೆ ಮತದಾನ ಮಾಡಬೇಕು ಎಂದರು.

ನಿಮ್ಮ ಸಹಪಾಠಿಗಳು, ಅಕ್ಕಪಕ್ಕದ ಮನೆಯವರಿಗೂ ಮತದಾನದಲ್ಲಿ ಭಾಗವಹಿಸಿ ಹಕ್ಕುಚಲಾಯಿಸಲು ಜಾಗೃತಿ ಮೂಡಿಸಬೇಕು. ಎಲ್ಲಾ ಮತ ಕೇಂದ್ರಗಳಲ್ಲಿ ಶೇ.100 ರಷ್ಟು ಮತಚಲಾವಣೆಯಾಗಬೇಕು ಎಂಬುದು ಚುನಾವಣಾ ಆಯೋಗದ ಗುರಿಯಾಗಿದೆ ಎಂದರು.

ಯುವ ಸಮುದಾಯದ ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿದ್ದು ಜಾತಿ, ಮತ ಹಣದ ಆಮಿಷವಿಲ್ಲದೆ ಮತ ಚಲಾವಣೆ ಮಾಡುವ ಮೂಲಕ ದೇಶದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಪ್ರಜೆಗಳ ಆಶಯಕ್ಕೆ ನಡೆದುಕೊಳ್ಳದ ಸರ್ಕಾರವನ್ನು ಬದಲಿಸುವ ಹಕ್ಕು ಮತದಾರರಿಗಿದೆ ಎಂದರು.

ಪ್ರಾಂಶುಪಾಲ ಅರವಿಂದ್ ಮಾತನಾಡಿ, ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ದೇಶವನ್ನು ಸುಭದ್ರವಾಗಿಸುವ, ಗೌರವ ಕಾಪಾಡುವ ಜೊತೆಗೆ ನಿರಂತರ ಅಭಿವೃದ್ಧಿಯತ್ತ ಕೊಂಡ್ಯೊಯ್ಯವಂತಿರಬೇಕು. ಸ್ವಾರ್ಥವಿಲ್ಲದ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಇ.ಟಿ ಶಿಕ್ಷಣ ಸಂಸ್ಥೆ ರಿಜಿಸ್ಟಾರ್ ನಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಪಿಡಿಒ ರಾಜೇಶ್ವರ, ಬಾಲಕರ ಶಾಲೆ ಮುಖ್ಯಶಿಕ್ಷಕ ಎಸ್.ಎನ್. ಸಂತಾನರಾಮನ್, ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಮಂಜುನಾಥ್ ಇತರರು ಇದ್ದರು. ನಂತರ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.ಮನೆಯಿಂದ ಮತದಾನ ಪರಿಶೀಲನೆಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದಿನಿಂದ 18ರವರೆಗೆ 85 ವರ್ಷ ಹಾಗೂ ಮೇಲ್ಪಟ್ಟವರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಡಾ.ಕುಮಾರ ತಾಲೂಕಿನ ಚಿಂದಗಿರಿಕೊಪ್ಪಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.

ಸ್ಟ್ರಾಂಗ್ ರೂಂಗೆ ಡಿಸಿ ಭೇಟಿ

ಜಿಲ್ಲಾಧಿಕಾರಿ ಡಾ.ಕುಮಾರ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಸ್ಪಿ ಎನ್.ಯತೀಶ್, ಉಪವಿಭಾಗಾಧಿಕಾರಿ ಮಹೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.