ಆಸೆ, ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸಿ: ಸದಾನಂದ ನಾಗಪ್ಪ ನಾಯ್ಕ

| Published : Jan 26 2025, 01:33 AM IST

ಆಸೆ, ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸಿ: ಸದಾನಂದ ನಾಗಪ್ಪ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಏಳ್ಗೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದ್ದು, ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.

ಗಂಗಾವತಿ: ಮತದಾರರು ಆಸೆ, ಆಮಿಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.

ನಗರದ ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯದ ಶ್ರೀ ರಾಮಭಟ್ ಜೋಶಿ ಸ್ಮಾರಕ ರಜತ ಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಆಮೀಷಗಳಿಗೆ ಬಲಿಯಾಗದೇ ಅಭಿವೃದ್ಧಿಗೆ ನೆರವಾಗುವ ಜನಪ್ರತಿನಿಧಿಗೆ ಮತ ಹಾಕಬೇಕು. ದೇಶದ ಏಳ್ಗೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದ್ದು, ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಬೇಕು. ಯೋಗ್ಯರನ್ನು ಆಯ್ಕೆ ಮಾಡಿದಾಗ ಮಾತ್ರ ದೇಶ ಪ್ರಗತಿ ದಿಕ್ಕಿನಲ್ಲಿ ಸಾಗಲು ಅನುಕೂಲ ಆಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ ಮಾತನಾಡಿ, ಚುನಾವಣೆ ಎಂಬುದು ಹಬ್ಬ ಇದ್ದಂತೆ. ಪ್ರತಿಯೊಬ್ಬರೂ ಖುಷಿಯಿಂದ ಪಾಲ್ಗೊಳ್ಳಬೇಕು. ಹಣ, ಹೆಂಡಕ್ಕೆ ಮತ ಮಾರಿಕೊಳ್ಳದೇ ದೇಶದ ಅಭಿವೃದ್ಧಿಗೆ ಹಿತ ಬಯಸುವ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಮಾತನಾಡಿ, ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯುವ ಸಮುದಾಯ ತಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಮತದಾನ ಮಾಡಿಸಲು ಪ್ರೇರೇಪಿಸುವ ಕೆಲಸ ಮಾಡಬೇಕು ಎಂದರು.

ತಹಸೀಲ್ದಾರ್ ಯು. ನಾಗರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಮತದಾರರ ಸಂಖ್ಯೆ ಹಾಗೂ ಮತದಾನ ಮಹತ್ವ ಕುರಿತು ಮಾತನಾಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡರ್, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಸಿಡಿಪಿಒ ಜಯಶ್ರೀ, ಗಂಗಾವತಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಬಸವರಾಜ ಎಂ.ಎಚ್., ಶಿಕ್ಷಣ ಇಲಾಖೆಯ ಟಿಪಿಒ ಉಮಾದೇವಿ ಪಾಟೀಲ್, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಶಿರಸ್ತೇದಾರ್ ರವಿಕುಮಾರ್ ನಾಯಕವಾಡಿ ಭಾಗವಹಿಸಿದ್ದರು.