ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕೆಆರ್‌ಎಸ್ ಪಕ್ಷದಿಂದ ಸ್ನಾತಕೋತ್ತರ ಪದವೀಧರ ನಿಶಾಂತ್ ಬಂಕಾಪುರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಹಾವೇರಿ: ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆಮಿಷವೊಡ್ಡಿ ಮತ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಪ್ರಜ್ಞಾವಂತರು ಮತ್ತು ವಿದ್ಯಾವಂತರು ಇಂತಹ ಆಮಿಷಗಳಿಗೆ ಒಳಗಾಗದೆ, ಸಾಮಾಜಿಕ ಕಳಕಳಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕೆಆರ್‌ಎಸ್ ಪಕ್ಷದಿಂದ ಸ್ನಾತಕೋತ್ತರ ಪದವೀಧರ ನಿಶಾಂತ್ ಬಂಕಾಪುರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಬಿಎ, ಬಿಕಾಂ, ಎಂಎಸ್ಸಿ, ಎಂಕಾ ಹಾಗೂ ಎಂಎಸ್‌ಡಬ್ಲೂ ಪದವೀಧರರು ಕಡಿಮೆ ವೇತನಕ್ಕೆ ದುಡಿಯುವ ಪರಿಸ್ಥಿತಿ ಬಂದೋದಗಿದೆ ಎಂದರು.

ಹಣದ ಆಮಿಷಕ್ಕೆ ಒಳಗಾಗಿ ಮತ ಚಲಾಯಿಸುವುದರಿಂದ ಪದವೀಧರರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು. ನಿಶಾಂತ್ ಬಂಕಾಪುರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲಿಸುವ ಮೂಲಕ ಪ್ರಜ್ಞಾವಂತ ಮತದಾರರು ತಮ್ಮ ಜವಾಬ್ದಾರಿಯನ್ನು ಸಾಬೀತುಪಡಿಸಬೇಕು ಎಂದು ಮನವಿ ಮಾಡಿದರು.

ನೇಮಕಾತಿ ಹಗರಣ ತಡೆಗೆ ಆದ್ಯತೆ: ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ನಿಶಾಂತ್ ಬಂಕಾಪುರ ಮಾತನಾಡಿ, ಪದವೀಧರರ ಸಮಸ್ಯೆಗಳನ್ನು ಆಲಿಸುವಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಅಭಿಪ್ರಾಯ ಮತಯಾಚನೆ ಸಂದರ್ಭದಲ್ಲಿ ವ್ಯಕ್ತವಾಗುತ್ತಿದೆ. ಪ್ರತಿಯೊಂದು ನೇಮಕಾತಿಯಲ್ಲೂ ಹಗರಣಗಳು ನಡೆಯುತ್ತಿವೆ ಎಂಬ ಆರೋಪಗಳಿದ್ದು, ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.

ಚುನಾವಣೆಯಲ್ಲಿ ಆಯ್ಕೆಯಾದರೆ ನಿಯಮಿತವಾಗಿ ಸರ್ಕಾರಿ ನೇಮಕಾತಿ ನಡೆಯುವಂತೆ ಒತ್ತಾಯಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿನ ಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಪ್ರಯತ್ನಿಸಲಾಗುವುದು. ಬ್ಯಾಂಕ್, ರೈಲ್ವೆ ಸೇರಿದಂತೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ದೊರೆಯುವಂತೆ ಕ್ರಮಕ್ಕೆ ಒತ್ತಾಯಿಸಲಾಗುವುದು. ಕರ್ನಾಟಕ ಲೋಕಸೇವಾ ಆಯೋಗವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ನಿರುದ್ಯೋಗಿ ಪದವೀಧರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದು, ಸಾಲ ಸೌಲಭ್ಯ ಕಲ್ಪಿಸುವುದು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ನಿರಂತರ ಉದ್ಯೋಗ ಮೇಳಗಳನ್ನು ಆಯೋಜಿಸುವುದು ತಮ್ಮ ಪ್ರಮುಖ ಉದ್ದೇಶಗಳಾಗಿವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಧರ್ಮರಾಜ ಬಿಂದಲಗಿ, ಚರಣರಾಜ ರೊಡ್ಡನವರ, ಮಲ್ಲನಗೌಡ ಲಕ್ಕನಗೌಡ್ರ, ದೇವೇಂದ್ರ ತಳವಾರ, ಮಂಜುನಾಥ ಶಿರಹಟ್ಟಿ, ಗಂಗಾ ಕೋರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.