ಸಾರಾಂಶ
ಕಲಬುರಗಿ ಕ್ಷೇತ್ರದಾದ್ಯಂತ 85 ವರ್ಷ ಮೇಲ್ಪಟ್ಟ 1,149 ಮತ್ತು 396 ವಿಶೇಷಚೇತನರ ಪೈಕಿ ಕ್ರಮವಾಗಿ ಮೊದಲನೇ ದಿನ 981 ಮತ್ತು 328 ಸೇರಿದಂತೆ ಒಟ್ಟಾರೆ 1,309 ಜನ ಮತದ ಹಕ್ಕು ಚಲಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೆ ಗುರುವಾರ ಜಿಲ್ಲೆಯಲ್ಲಿ ಚಾಲನೆಗೊಂಡಿದ್ದು, ಮೊದಲ ದಿನವೇ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಶೇ.84.72ರಷ್ಟು ಮತದಾನವಾಗಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.ಕ್ಷೇತ್ರದಾದ್ಯಂತ 85 ವರ್ಷ ಮೇಲ್ಪಟ್ಟ 1,149 ಮತ್ತು 396 ವಿಶೇಷಚೇತನರ ಪೈಕಿ ಕ್ರಮವಾಗಿ ಮೊದಲನೇ ದಿನ 981 ಮತ್ತು 328 ಸೇರಿದಂತೆ ಒಟ್ಟಾರೆ 1,309 ಜನ ಮತದ ಹಕ್ಕು ಚಲಾಯಿಸಿದ್ದಾರೆ.
ಭಾರತ ಚುನಾವಣಾ ಆಯೋಗ ಈ ಬಾರಿ ನೀಡಿರುವ ವಿಶೇಷ ಅವಕಾಶವನ್ನು ಬಳಸಿಕೊಂಡ ಹಿರಿಯ ಜೀವಿಗಳು ಮತ್ತು ವಿಶೇಷಚೇತನರು ತಮ್ಮ ಹಕ್ಕಿನ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಂಭ್ರಮಿಸಿದರು. ಪ್ರಜಾಪ್ರಭುತ್ವದಲ್ಲಿ ತಾವು ಭಾಗೀದಾರರು ಎಂದು ತುಂಬಾ ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದಾರೆ.ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಮತದಾನ ಪ್ರಮಾಣ ಹೆಚ್ಚಿಸಲು ಭಾರತ ಚುನಾವಣಾ ಆಯೋಗ ಮತಗಟ್ಟೆಗೆ ಬಂದು ಮತದಾನ ಮಾಡಲು ಆಗದವರನ್ನು ಮನೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕೆ ಜಿಲ್ಲೆಯಾದ್ಯಂತ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಸುಮಾರು 81 ತಂಡಗಳನ್ನು ರಚಿಸಲಾಗಿತ್ತು. ಪ್ರತಿ ತಂಡದೊಂದಿಗೆ ಪಿ.ಆರ್.ಓ, ಎ.ಪಿ.ಆರ್.ಓ, ಮೈಕ್ರೋ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಇರಲಿದ್ದು, ಮನೆ-ಮನೆಗೆ ಪೋಸ್ಟಲ್ ಬಾಕ್ಸ್‍ನೊಂದಿಗೆ ತೆರಳಿ ಮತದಾನ ಮಾಡಿಸಿಕೊಂಡರು.ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,233 ಹಿರಿಯ ನಾಗರೀಕರು ಮತ್ತು 22,123 ವಿಶೇಷ ಚೇತನರಿದ್ದು, ಇದರಲ್ಲಿ 1,149 ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಸೇರಿದಂತೆ ಒಟ್ಟು 1,545 ಜನ ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದರು.