ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಭಾರತ ಒಕ್ಕೂಟ ವ್ಯವಸ್ಥೆಯೊಂದಿಗೆ ಮುನ್ನಡೆಯುತ್ತಿದ್ದು ಪ್ರಪಂಚದಲ್ಲಿಯೇ ಅತಿಹೆಚ್ಚು ಯುವ ಸಮುದಾಯ ಹೊಂದಿರುವ ದೇಶ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.ತಾಲೂಕಿನ ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಿರೀಸಾವೆ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ವರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಜನಪ್ರತಿನಿಧಿಗಳ ಆಯ್ಕೆ ಮಾಡುವ ವೇಳೆ ಮತದಾರನ ಪಾತ್ರ ಪ್ರಮುಖವಾಗಿದ್ದು, ಸಾಕಷ್ಟು ಚಿಂತನೆ ನಡೆಸಬೇಕಿದೆ. ಹಣ ಇದ್ದರೆ ಎಲ್ಲವೂ ಸಾಧ್ಯ ಎಂಬುದು ವಿಪರ್ಯಾಸದ ಸಂಗತಿ. ಆದರೆ ದೇಶದ ಅಭಿವೃದ್ಧಿ ಹಾಗೂ ಜನಸ್ಪಂದನೆಗೆ ಮತದಾರ ಮನ್ನಣೆ ನೀಡಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ಮಕ್ಕಳು ದೇಶದ ಆಸ್ತಿ. ಅವರನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದರೆ ನಾವು ಸರಿಯಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ಸೋತಿದ್ದೇವೆ. ಭಾರತದ ಒಕ್ಕೂಟ ವ್ಯವಸ್ಥೆಯ ಭದ್ರಬುನಾದಿಯನ್ನು ನಿರ್ಮಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ನಾಗರಿಕರ ಪಾತ್ರ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ವರ್ಧೆ ನಡೆಯಿತು. ಅರಕಲಗೂಡು, ಸಕಲೇಶಪುರ, ಹಾಸನ, ಮೊಸಳೆ ಹೊಸಹಳ್ಳಿ, ಜಾವಗಲ್, ಚನ್ನರಾಯಪಟ್ಟಣ ೨೦ ಕಾಲೇಜುಗಳಿಂದ ೩೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕೆ.ವಿ.ಅಮೂಲ್ಯ (ಪ್ರಥಮ), ಜಾವಗಲ್ ಕಾಲೇಜಿನ ಎ.ವಿ.ಕವನ (ದ್ವಿತೀಯ), ಚನ್ನರಾಯಪಟ್ಟಣ ಕಾಲೇಜಿನ ಹರ್ಷಿತಾ (ತೃತೀಯ) ಹಾಗೂ ಹಿರೀಸಾವೆ ಕಾಲೇಜಿನ ಜಿ.ಎಲ್.ದಿಗಂತ್ ನಾಲ್ಕನೇ ಸ್ಥಾನಕ್ಕೆ ಭಾಜನರಾಗಿದ್ದು ಎಲ್ಲರನ್ನೂ ಅಭಿನಂದಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಎನ್.ಲೋಕೇಶ್, ಹಿರೀಸಾವೆ ಹೋಬಳಿ ಅಧ್ಯಕ್ಷ ಎಚ್.ಎ.ಪ್ರಮೋದ್, ಮಾಜಿ ಅಧ್ಯಕ್ಷರಾದ ಎಚ್.ಇ.ಬೋರಣ್ಣ, ಡಾ.ಎಚ್.ಪಿ.ಶಂಕರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ಪ್ರಾಂಶುಪಾಲರಾದ ಬಿ.ಎಚ್.ಲಕ್ಷ್ಮಣಗೌಡ, ಎಂ.ಶಂಕರ್, ಎಚ್.ಜಿ.ರಾಮಕೃಷ್ಣ, ಬೊಮ್ಮೇಗೌಡ, ಜಬಿವುಲ್ಲಾ ಬೇಗ್, ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಎನ್. ಆರ್.ಆಶಾ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.