ಇಂದಿನಿಂದ ಪ್ರತಿ ಮನೆಗೂ ಕ್ಯೂಆರ್ ಕೋಡ್ ಮತದಾರರ ಮಾಹಿತಿ ಚೀಟಿಯ ಹಂಚಿಕೆ

| Published : Apr 17 2024, 01:18 AM IST

ಇಂದಿನಿಂದ ಪ್ರತಿ ಮನೆಗೂ ಕ್ಯೂಆರ್ ಕೋಡ್ ಮತದಾರರ ಮಾಹಿತಿ ಚೀಟಿಯ ಹಂಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೂತ್ ಮಟ್ಟದ ಅಧಿಕಾರಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ಹಂಚಿಕೆ ಮಾಡಿಸಲಾಗುತ್ತದೆ ಹಾಗೂ ಮತದಾನ ಮಾರ್ಗದರ್ಶಿಗಳಿಂದ ಅವರಿಗೆ ಮಾಹಿತಿ ನೀಡಲಾಗುತ್ತದೆ. ಚುನಾವಣೆಯನ್ನು ಯಶಸ್ವಿಗೊಳಿಸಲು ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೆಸ್ಕ್ ನವರು ನಮ್ಮೊಂದಿಗೆ ಸೇರಿ ತಮ್ಮ ಸಿಬ್ಬಂದಿಯಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ತಲುಪುವಂತೆ ಮಾಡಬೇಕು. ಆಗ ಮಾತ್ರವೇ ನಮ್ಮ ಉದ್ದೇಶ ಸಫಲವಾಗುವುದು

ಕನ್ನಡಪ್ರಭ ವಾರ್ತೆ ಮೈಸೂರು

ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರು ಮತದಾನ ಮಾಡಲು ಮುಂದೆ ಬರುವಂತೆ ಮಾಡಲು ಇಂದಿನಿಂದ ಕ್ಯೂಆರ್ ಕೋಡ್ ಇರುವ ಮತದಾರರ ಮಾಹಿತಿ ಚೀಟಿಯನ್ನು ಹಂಚಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸೆಸ್ಕ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮಂಗಳವಾರ ಆಯೋಜಿಸಿದ್ದ ಬಲೂನ್ ಅನಾವರಣ ಹಾಗೂ ಜಾಥಾದಲ್ಲಿ ಮಾತನಾಡಿದ ಅವರು, ಮತದಾರರು ಆ ಚೀಟಿಯ ಹಿಂಭಾಗದಲ್ಲಿರುವ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಪೋಲಿಂಗ್ ಸ್ಟೇಷನ್ ಮಾಹಿತಿಯನ್ನು ಪಡೆಯಬಹುದು ಎಂದರು.

ಬೂತ್ ಮಟ್ಟದ ಅಧಿಕಾರಿಗಳಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ಹಂಚಿಕೆ ಮಾಡಿಸಲಾಗುತ್ತದೆ ಹಾಗೂ ಮತದಾನ ಮಾರ್ಗದರ್ಶಿಗಳಿಂದ ಅವರಿಗೆ ಮಾಹಿತಿ ನೀಡಲಾಗುತ್ತದೆ. ಚುನಾವಣೆಯನ್ನು ಯಶಸ್ವಿಗೊಳಿಸಲು ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸಲು ಸೆಸ್ಕ್ ನವರು ನಮ್ಮೊಂದಿಗೆ ಸೇರಿ ತಮ್ಮ ಸಿಬ್ಬಂದಿಯಿಂದ ಪ್ರತಿ ಮನೆಗೂ ಮತದಾರರ ಮಾಹಿತಿ ಚೀಟಿಯನ್ನು ತಲುಪುವಂತೆ ಮಾಡಬೇಕು. ಆಗ ಮಾತ್ರವೇ ನಮ್ಮ ಉದ್ದೇಶ ಸಫಲವಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿಯು ಚುನಾವಣೆಯನ್ನು ಯಶಸ್ವಿಯಾಗಿಸಲು ಗ್ರಾಮ, ತಾಲೂಕು ಹಾಗೂ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರಲ್ಲಿ ನೈತಿಕ ಮತದಾನ ಮಾಡಲು ಪ್ರೇರೇಪಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಮಾತನಾಡಿ, ಹಿಂದೆಂದೂ ಆಗಿರದಷ್ಟು ಮತದಾನವನ್ನು ಈ ಬಾರಿಯ ಚುನಾವಣೆಯಲ್ಲಿ ಆಗುವಂತೆ ಮಾಡಬೇಕು. ಅದು ಹೇಗೆ ಎಂದರೆ ದಿನದ 24 ಗಂಟೆಗಳು ಜನರ ಮುಂದೆ ಮತದಾನದ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಅವರಿಗೂ ಮತದಾನ ಮಾಡಲೇಬೇಕೆಂಬ ಮನೋಭಾವ ಉಂಟಾಗುತ್ತದೆ. ಇದರಿಂದ ಮತದಾನ ಹೆಚ್ಚಳದ ಉದ್ದೇಶ ಸಫಲವಾಗುತ್ತದೆ ಎಂದರು.

ಕಡ್ಡಾಯವಾಗಿ ಮತದಾನ ಮಾಡಿ

ನಟ ಜಿಮ್ ರವಿ ಮಾತನಾಡಿ, ಮತದಾನ ಎಂಬುದು ಒಂದು ಹಬ್ಬದ ಹಾಗೆ. ಇದರಲ್ಲಿ ಎಲ್ಲರೂ ನೈತಿಕವಾಗಿ ಭಾಗವಹಿಸಬೇಕು. ಸದೃಢ ದೇಹಬೇಕೆಂದರೆ ಪ್ರತಿನಿತ್ಯವು ವ್ಯಾಯಾಮ ಮಾಡಬೇಕು. ಅದೇ ರೀತಿಯಾಗಿ ದೇಶವನ್ನು ಅಭಿವೃದ್ಧಿಗೊಳಿಸಲು ಉತ್ತಮ ನಾಯಕನ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು. ಬಹಳಷ್ಟು ಜನ ಚುನಾವಣೆಯ ದಿನದಂದು ರಜಾ ದಿನ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು, ಮತದಾನ ನಮ್ಮೆಲ್ಲರ ಹಕ್ಕು ಆ ದಿನದಂದು ಪ್ರತಿಯೊಬ್ಬರು ತಮ್ಮ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮತದಾರರು ಯಾವುದೇ ಆಸೆ ಅಮಿಷಗಳಿಗೆ ಒಳಗಾಗದೆ ನೈತಿಕವಾಗಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ಈ ಬಾರಿ ಮೈಸೂರಿನಲ್ಲಿ ಶೇ.100 ರಷ್ಟು ಮತದಾನ ಮಾಡುವುದಕ್ಕೆ ನಾವೆಲ್ಲರೂ ಶ್ರಮಿಸೋಣ ಎಂದರು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ನಗರ ಪಾಲಿಕೆಯ ಆಯುಕ್ತೆ ಡಾ.ಎನ್.ಎನ್. ಮಧು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.