ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ದಾಖಲೆಗಳಲ್ಲಿ ತಪ್ಪು ಇರುವವರು ಹಾಗೂ ೨೦೦೨ರ ಮತದಾರರ ಪಟ್ಟಿಗೆ ಹೊಂದಾಣಿಕೆಯಾಗದಿರುವ ಮಂಡ್ಯ ನಗರ ವ್ಯಾಪ್ತಿಯ 16313 ಮಂದಿಗೆ ನೋಟಿಸ್ ಜಾರಿಗೊಳಿಸಿದ್ದು, ಸೆಪ್ಟೆಂಬರ್‌ ೫ ರಿಂದ ಅಕ್ಟೋಬರ್ ೨೭ರವರೆಗೆ ನಗರದ ೧೫ ಕೇಂದ್ರಗಳಲ್ಲಿ ವಿಚಾರಣೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ದಾಖಲೆಗಳಲ್ಲಿ ತಪ್ಪು ಇರುವವರು ಹಾಗೂ ೨೦೦೨ರ ಮತದಾರರ ಪಟ್ಟಿಗೆ ಹೊಂದಾಣಿಕೆಯಾಗದಿರುವ ನಗರ ವ್ಯಾಪ್ತಿಯ 16313 ಮಂದಿಗೆ ನೋಟಿಸ್ ಜಾರಿಗೊಳಿಸಿದ್ದು, ಸೆಪ್ಟೆಂಬರ್‌ ೫ ರಿಂದ ಅಕ್ಟೋಬರ್ ೨೭ರವರೆಗೆ ನಗರದ ೧೫ ಕೇಂದ್ರಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ತಿಳಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ತಪ್ಪಿರುವ 9983 ಮಂದಿ ಹಾಗೂ ೨೦೦೨ರ ಮತದಾರರ ಪಟ್ಟಿಗೆ ಹೊಂದಾಣಿಕೆಯಾಗದಿರುವ 6630 ಜನರಿಗೆ ಈಗಾಗಲೇ ೧೫ ಮಂದಿ ಹೆಚ್ಚುವರಿ ಸಹಾಯಕ ಮತದಾನ ನೋಂದಣಾಧಿಕಾರಿಗಳ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ. ವಿಚಾರಣೆ ನಡೆಸುವುದಕ್ಕೆ ಮೂರು ಅವಕಾಶಗಳನ್ನು ನೀಡಿರುವುದಾಗಿ ಹೇಳಿದ್ದಾರೆ.

ಮತದಾರರಪಟ್ಟಿಗೆ ಸೇರ್ಪಡೆಗೊಳ್ಳಲು ನೋಟಿಸ್ ಜಾರಿಗೊಳಿಸಿರುವವರು ವಿಚಾರಣೆಗೆ ಹಾಜರಾಗಲು ಅನುಕೂಲವಾಗುವಂತೆ ನಗರ ವ್ಯಾಪ್ತಿಯಲ್ಲಿ ೧೫ ಕೇಂದ್ರಗಳನ್ನು ತೆರೆಯಲಾಗಿದೆ. ಹಳೇ ನಗರಸಭೆ ಕಚೇರಿ, ಶಂಕರಪುರ ಸರ್ಕಾರಿ ಪ್ರೌಢಶಾಲೆ, ನಿರ್ಮಿತಿ ಕೇಂದ್ರ, ಕೆಆರ್‌ಐಡಿಎಲ್ ಕಚೇರಿ, ಆಭಿನವ ಭಾರತಿ ಪಿಯು ಕಾಲೇಜು, ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ, ತಾಲೂಕು ಪಂಚಾಯ್ತಿ ಕಚೇರಿ, ಆಂಬೇಡ್ಕರ್ ಭವನದ ಮಿನಿ ಸಭಾಂಗಣ, ಬಾಲಭವನ, ಬಾಲಕಿಯರ ಪದವಿಪೂರ್ವ ಕಾಲೇಜು (ಕಲ್ಲುಕಟ್ಟಡ), ಮಹಿಳಾ ಸರ್ಕಾರಿ ಕಾಲೇಜು, ಗುತ್ತಲು ಕಾಲೋನಿ ಕೆಪಿಎಸ್ ಸ್ಕೂಲ್, ರೋಟರಿ ಎಜುಕೇಷನ್ ಸೊಸೈಟಿ, ವಿಮಲಾ ಕಾನ್ವೆಂಟ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ನೋಟಿಸ್ ಜಾರಿಗೊಂಡಿರುವವರು ಆಯೋಗ ನೀಡಿರುವ ನಿರ್ದೇಶನದಂತೆ ೧೨ ದಾಖಲೆಗಳಲ್ಲಿ ಆಧಾರ್‌ ಕಾರ್ಡ್‌ ಜೊತೆಗೆ ಎರಡು ಹೆಚ್ಚುವರಿ ದಾಖಲೆಗಳನ್ನು ಹಾಜರುಪಡಿಸಿ ಮತದಾರರಪಟ್ಟಿಗೆ ಸೇರ್ಪಡೆಗೊಳ್ಳಬಹುದು. ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಒದಗಿಸಿದಲ್ಲಿ ತಕ್ಷಣವೇ ಆನ್‌ಲೈನ್‌ಗೆ ಅಪ್ಲೋಡ್ ಮಾಡಲಾಗುವುದು. ವಿಚಾರಣೆಗೆ ಹಾಜರಾಗುವುದಕ್ಕೆ ಮೂರು ಬಾರಿ ನೋಟಿಸ್‌ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಷ್ಟರೊಳಗೆ ದಾಖಲೆಗಳನ್ನು ತಂದು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಹಾಗೂ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ನಮೂನೆ-೬ ಮತ್ತು ಘೋಷಣಾ ಪತ್ರ, ವರ್ಗಾವಣೆ, ತಿದ್ದುಪಡಿಗೆ ನಮೂನೆ-೮ ಮತ್ತು ಘೋಷಣಾ ಪತ್ರ ಹಾಗೂ ಕೈಬಿಡಬೇಕಾದ ಪ್ರಕರಣಗಳಿಗೆ ನಮೂನೆ-೭ನ್ನು ಸಲ್ಲಿಸಬೇಕು. ಅಕ್ಟೋಬರ್ ೨೭ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ಹೇಳಿದ್ದಾರೆ.