ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಆದರೆ, ಈಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಮತದಾರರನ್ನು ಭೇಟಿಯಾಗಲು ದಸರಾ ರಜೆ ಅಡ್ಡಿಯಾಗಿದೆ

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಆದರೆ, ಈಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಮತದಾರರನ್ನು ಭೇಟಿಯಾಗಲು ದಸರಾ ರಜೆ ಅಡ್ಡಿಯಾಗಿದೆ.

ಶಾಲಾ ಕಾಲೇಜುಗಳಿಗೆ ಅಕ್ಟೋಬರ್ 3ರಿಂದ 21ರವರೆಗೆ ದಸರಾ ರಜೆ ಘೋಷಣೆಯಾಗಿದೆ. ಹೀಗಾಗಿ ಮತದಾರರಾದ ಶಿಕ್ಷಕರು ಮತ್ತು ಉಪನ್ಯಾಸಕರು ಊರು ಸೇರಿದ್ದಾರೆ. ಅವರನ್ನು ಭೇಟಿಯಾಗಿ ಮತಯಾಚನೆ ಮಾಡುವುದು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರಿಗೆ ಸವಾಲಾಗಿ ಪರಿಣಮಿಸಿದೆ.

ಮನೆಗೆ ಹೋದರೂ ಸಿಗದ ಶಿಕ್ಷಕರು:

ಬೆಂಗಳೂರು ಶಿಕ್ಷಕರ ಕ್ಷೇತ್ರ 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಮತದಾನ ದಿನವೂ ನಿಗದಿಯಾಗಿದೆ. ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮತ್ತು ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ಅವರ ಬೆಂಬಲಿಗರು ಕಾಲಿಗೆ ಚಕ್ರಕಟ್ಟಿಕೊಂಡು ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮನೆಗಳ ಕದ ತಟ್ಟುತ್ತಿದ್ದಾರೆ. ಆದರೆ, ಅಭ್ಯರ್ಥಿಗಳಿಗೆ ಶಿಕ್ಷಕರ ದರ್ಶನವಾಗುವುದೇ ಕಷ್ಟವಾಗಿದೆ.

ದಸರಾ ರಜೆ ಹಿನ್ನೆಲೆಯಲ್ಲಿ ಬಹುತೇಕ ಶಿಕ್ಷಕರು ಕುಟುಂಬ ಸಮೇತ ಸಂಬಂಧಿಕರ ಊರು ಸೇರಿದ್ದಾರೆ. ರಜೆ ಮುಗಿದ ಮರು ದಿನವೇ ಚುನಾವಣೆ ಇರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ. ಶಿಕ್ಷಕರನ್ನು ಒಟ್ಟಿಗೆ ಸೇರಿಸಿ ಮತ ಭಿಕ್ಷೆ ಪಡೆಯುವುದು ಹೇಗೆ ಎಂಬುದು ಅಭ್ಯರ್ಥಿಗಳ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಮನೆ ಮನೆ ಪ್ರಚಾರ ಶುರು ಮಾಡಿರುವ ಅಭ್ಯರ್ಥಿಗಳ ಬೆಂಬಲಿಗರು, ಮತದಾರ ಶಿಕ್ಷಕರ ದೂರುವಾಣಿ ಸಂಖ್ಯೆ ಸಂಗ್ರಹ ಮಾಡುತ್ತಿದ್ದಾರೆ. ಫೋನ್ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಅಲ್ಲದೆ, ಶಿಕ್ಷಕರು ಇರುವ ಊರುಗಳಿಗೆ ಹೋಗಿ ಕರಪತ್ರದ ಜೊತೆಗೆ ಉಡುಗೊರೆಯ ಆಶ್ವಾಸನೆ ಕೊಟ್ಟು ನಮ್ಮ ಪರವಾಗಿ ಮತ ಚಲಾಯಿಸಬೇಕು ಎಂದು ದುಂಬಾಲು ಬೀಳುತ್ತಿದ್ದಾರೆ.

ಮತದಾರರ ಮನವೊಲಿಕೆಗೆ ಪರ್ಯಾಯ ಮಾರ್ಗ:

ಶಿಕ್ಷಕರು ನೇರವಾಗಿ ಸಿಗದಿದ್ದರೂ , ದೂರವಾಣಿ, ವಾಟ್ಸ್ ಆಪ್ , ಟ್ವಿಟರ್ ಮೂಲಕ ಅವರನ್ನು ತಲುಪುವ ಪ್ರಯತ್ನ ನಡೆದಿದೆ. ಪ್ರತಿಯೊಬ್ಬ ಮತದಾರನಿಗೆ ಕರೆ ಮಾಡಿ ಮತ ಯಾಚನೆ ನಡೆಸುವುದಕ್ಕಾಗಿಯೇ ಪ್ರತಿಯೊಬ್ಬ ಅಭ್ಯರ್ಥಿಗೂ ಐಟಿ ಸೆಲ್ ತೆರೆದಿದ್ದಾರೆ. ಆನ್ ಲೈನ್ , ವಿಡಿಯೋ ಕಾಲ್ ಗಳು, ಟೆಕ್ಸ್ಟ್ ಸಂದೇಶಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಬಹಿರಂಗ ಸಮಾವೇಶಗಳನ್ನು ನಡೆಸಲು ದಸರಾ ರಜೆ ಅಡ್ಡಿಯಾಗಿರುವುದರಿಂದ ಪರ್ಯಾಯ ಮಾರ್ಗಗಳ ಮೂಲಕ ಮತದಾರರ ಮನವೊಲಿಸುವ ಪ್ರಯತ್ನಗಳು ನಡೆದಿವೆ.

ಬಾಕ್ಸ್ ...............

ಕೈ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಸವಾಲು:

ಆಡಳಿತರೂಢ ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ - ಬಿಜೆಪಿ ಮೈತ್ರಿಕೂಟಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಅಖಾಡಕ್ಕಿಳಿದು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.

ಕಳೆದ ನಾಲ್ಕು ಅವಧಿಯಿಂದಲೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿನ ಮೇಲೆಯೇ ಪುಟ್ಟಣ್ಣ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಪ್ರತಿ ಬಾರಿಯಂತೆ ಈಗಲೂ ಶಿಕ್ಷಕರೇ ಪುಟ್ಟಣ್ಣ ಪರವಾಗಿ ಮತಯಾಚನೆ ಮಾಡುತ್ತಿದ್ದು, ಇದು ಅವರು ಶಿಕ್ಷಕರೊಂದಿಗೆ ಉತ್ತಮ ಒಡನಾಟ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಕರ ಪರವಾಗಿ ತಾವು ಮಾಡಿರುವ ಕೆಲಸ ಹಾಗೂ ಹೋರಾಟಗಳು ತಮ್ಮನ್ನು ಮತ್ತೊಮ್ಮೆ ಗೆಲುವಿನ ದಡ ಸೇರಿಸಲಿದೆ ಎಂಬ ಉಮೇದಿನಲ್ಲಿ ಪುಟ್ಟಣ್ಣ ಇದ್ದಾರೆ.

ಇನ್ನು ಕಳೆದ ಉಪ ಚುನಾವಣೆಯಲ್ಲಿ ಸೋಲು ಕಂಡಿರುವ ಎ.ಪಿ.ರಂಗನಾಥ್ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ. ವಕೀಲರಾಗಿದ್ದರು ಸಹ ರಂಗನಾಥ್ ರವರು ಶಿಕ್ಷಕರ ಪರವಾಗಿ ಧ್ವನಿ ಹೋರಾಟ ನಡೆಸಿ ಗಮನ ಸೆಳೆದಿದ್ದಾರೆ. ಅಲ್ಲದೆ, ಜೆಡಿಎಸ್ - ಬಿಜೆಪಿ ಮೈತ್ರಿ ಸಾಧಿಸಿರುವುದು ಹಾಗೂ ಶಿಕ್ಷಕರು ಬದಲಾವಣೆ ಬಯಸಿರುವುದು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದಲ್ಲಿ ರಂಗನಾಥ್ ಇದ್ದಾರೆ.

ಆಡಳಿತ ಮತ್ತು ವಿಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮದೇ ಆದ ತಂತ್ರ ಹೂಡುತ್ತಿದ್ದಾರೆ. ಹೀಗಾಗಿ ಚುನಾವಣಾ ಅಖಾಡ ರಂಗೇರುತ್ತಿದೆ. ಮತದಾರರ ಒಲವು ಗಳಿಸಲು ಎರಡು ಪಕ್ಷದ ಅಭ್ಯರ್ಥಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಲೆಕ್ಕಾಚಾರಗಳು ಬುಡಮೇಲಾಗುವ ಸಾಧ್ಯತೆಗಳು ಇವೆ.

ಬಾಕ್ಸ್ ............

ಕೈ ಕಾರ್ಯಕರ್ತರಿಗೆ ಶಿಕ್ಷಕರ ಬಲ:

ಬೆಂಗಳೂರು ಶಿಕ್ಷಕರ ಕ್ಷೇತ್ರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯನ್ನು ಒಳಗೊಂಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಸಿಎಂ ಡಿ.ಕೆ.ಶಿವಕುಮಾರ್ ಜೊತೆಗೆ ಮಾಜಿ ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಬಾಲಕೃಷ್ಣ, ಶಾಸಕರಾದ ಇಕ್ಬಾಲ್ ಹುಸೇನ್, ಯೋಗೇಶ್ವರ್ ಅವರೆಲ್ಲರು ಪಕ್ಷದ ಅಭ್ಯರ್ಥಿ ಪುಟ್ಟಣ್ಣ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮತದಾರ ಶಿಕ್ಷಕರನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ಪುಟ್ಟಣ್ಣ ಪರವಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರೇ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಮತಬೇಟೆಯಲ್ಲಿ ತೊಡಗಿದ್ದಾರೆ.

ಬಾಕ್ಸ್‌.................

ಎನ್‌ಡಿಎ ಉಸ್ತುವಾರಿಗಳ ನಿಯೋಜನೆ:

ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿರುವ ಉಭಯ ಪಕ್ಷಗಳ ನಾಯಕರು ಮತದಾರ ಶಿಕ್ಷಕರ ಮನವೊಲಿಸಲು ಎನ್ ಡಿಎ ಉಸ್ತುವಾರಿಗಳನ್ನು ನಿಯೋಜನೆ ಮಾಡಿದೆ.

10ರಿಂದ 15 ಶಿಕ್ಷಕ ಮತದಾರರಿಗೆ ಗ್ರಾಮಗಳಲ್ಲಿ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ವಾರು ಜೆಡಿಎಸ್ - ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡಂತೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಇವರು ನಿರಂತರವಾಗಿ ಶಿಕ್ಷಕರ ಸಂಪರ್ಕದಲ್ಲಿದ್ದು, ಎನ್ ಡಿಎ ಅಭ್ಯರ್ಥಿ ರಂಗನಾಥ್ ಪರ ಮತ ಚಲಾವಣೆ ಮಾಡುವಂತೆ ಮನವೊಲಿಸುತ್ತಿದ್ದಾರೆ.

17ಕೆಆರ್ ಎಂಎನ್ 5,6.ಜೆಪಿಜಿ

5.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ

6.ಜೆಡಿಎಸ್ - ಬಿಜೆಪಿ ಅಭ್ಯರ್ಥಿ ಎ.ಪಿ.ರಂಗನಾಥ್