ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮತದಾರ ಪ್ರಭುಗಳನ್ನು ಸ್ಯಾಡಿಸ್ಟ್ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ನಾನು ಹೇಳಿಲ್ಲ. ಇಡೀ ವ್ಯವಸ್ಥೆ ಸ್ಯಾಡಿಸ್ಟ್ ಆಗಿದೆ ಎಂದು ಹೇಳಿದ್ದೇನೆ ಎಂದು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಸ್ಪಷ್ಟನೆ ನೀಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿರುವ ನ್ಯೂನತೆ ಸರಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ನನ್ನ ಸೋಲಿಗೆ ನಾನೇ ಕಾರಣ, ಮುಂದೆ, ವಾರಕ್ಕೆ ಒಂದು ಮಡಿಕೇರಿ ಕಾಂಗ್ರೆಸ್ ಕಚೇರಿಯಲ್ಲಿ ಹಾಗೂ ಒಂದು ದಿನ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲಾಗುವುದು ಎಂದರು.ಕೇಂದ್ರದ ಸಚಿವ ಸಂಪುಟದಲ್ಲಿ 72 ಸಚಿವರ ಪೈಕಿ ಒಂದೇ ಸಮುದಾಯಕ್ಕೆ ಸೇರಿದ 25 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಹಿಂದುಳಿದ ಸಮುದಾಯಕ್ಕೆ ಯಾವುದೇ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರ ಸ್ವಾಮಿ ಅವರು, ಕಸ್ತೂರಿ ರಂಗನ್ ವರದಿ, ಕಾವೇರಿ, ಮೇಕೆದಾಟು, ಕಳಸಬಂಡೂರಿ, ಮಹದಾಯಿ,ಅಲಮಟ್ಟಿ ಸೇರಿದಂತೆ ರಾಜ್ಯದ ನೀರಾವರಿ ಸಮಸ್ಯೆ ಪರಿಹರಿಸಲಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬರಪರಿಹಾರ, ರೈತರ ಸಾಲಮನ್ನಾ, ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲುಹಣ ಕೇಂದ್ರದಿಂದ ಕೊಡಿಸಿಕೊಡುವಂತೆ ಹಾಗೂ ಕೊಡಗಿಗೆ ಬೃಹತ್ ಕೈಗಾರಿಗೆ ತರಲಿ ಎಂದು ಒತ್ತಾಯಿಸಿದರು. ಡಿಕೆಶಿ ಮನೆ ಬದಲಾವಣೆ:ಅದೃಷ್ಟ ಖುಲಾಯಿಸುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರಿ ಬಂಗಲೆ ಬದಲಾಯಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವೇ ಸ್ಟೋರಿ ಕ್ರಿಯೇಟ್ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಶಿವಕುಮಾರ್ ಅವರು ಇರುವ ಈಗಿನ ಕಟ್ಟಡ ಸೋರುತ್ತಿದೆ. ತಾತ್ಕಾಲಿಕವಾಗಿ ಒಂದು ತಿಂಗಳ ಮಟ್ಟಿಗೆ ಮನೆ ಬದಲಾವಣೆ ಚಿಂತನೆಯಲ್ಲಿದ್ದಾರೆ ಎಂದರು.
ಸಿಎಂ ಬದಲಾವಣೆ ಇಲ್ಲ:ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸುವ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ಸದ್ಯಕ್ಕೆ ದೂರವಾದ ವಿಚಾರ.
ಇದೊಂದು ಊಹಾಪೋಹದ ಎಂದು ತಳ್ಳಿ ಹಾಕಿದರು.ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಮುಖಭಂಗ ಮಾಡಿದ್ದಾರೆ. ಮೈಸೂರು ನಗರ ಅಭಿವೃದ್ಧಿಗೆ ಸಿದ್ದರಾಮಯ್ಯನವರ ಕೊಡುಗೆ ಸಾಕಷ್ಟಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಕೊಟ್ಟಮುಡಿ ಹಂಸ, ಟಾಟು ಮೊಣ್ಣಪ್ಪ, ವಿಶು ರಂಜಿ, ಮುಕ್ಕಾಟಿರ ಸಂದೀಪ್ ಇದ್ದರು.