ಸಾರಾಂಶ
ಸಂಡೂರು: ಲೋಕಸಭೆ ಚುನಾವಣೆ ಪ್ರಯುಕ್ತ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯುಕ್ತ ತಾಲೂಕಿನ ಸ್ವೀಪ್ ಸಮಿತಿಯಿಂದ ಮಂಗಳವಾರ ಪಟ್ಟಣದ ಎಪಿಎಂಸಿ ಬಳಿಯ ಸರ್ಕಾರಿ ಪ್ರೌಢ ಶಾಲಾ ಮೈದಾನದಲ್ಲಿ ವೋಟರ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಯಿತು.ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಕೆ.ಎಚ್. ಸತೀಶ್ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಕೋರಿದರು. ಕ್ರೀಡಾಕೂಟದಲ್ಲಿ ಎಂಟು ತಂಡಗಳು ನೋಂದಾಯಿಸಿಕೊಂಡಿದ್ದವು.
ಡಿಇಒ ತಂಡಕ್ಕೆ ಪ್ರಥಮ ಸ್ಥಾನ:ಕ್ರಿಕೆಟ್ ಪಂದ್ಯಾವಳಿಯಲ್ಲಿ ಡಿಇಒ (ಡಾಟಾ ಎಂಟ್ರಿ ಆಪರೇಟರ್ಸ್) ತಂಡವು ಪ್ರಥಮ ಸ್ಥಾನ ಪಡೆದು ಆಕರ್ಷಕ ಕಪ್‌ನೊಂದಿಗೆ ₹೨೫೦೦ ನಗದು ಬಹುಮಾನವನ್ನು ತನ್ನದನ್ನಾಗಿಸಿಕೊಂಡಿತು. ಜಿಪಿಟಿ ಶಿಕ್ಷಕರ ತಂಡವು ದ್ವಿತೀಯ ಬಹುಮಾನ, ₹೧೫೦೦ ನಗದು ಪಡೆಯಿತು. ಮ್ಯಾನ್ ಆಫ್ ದಿ ಸಿರೀಸ್ ಬಹುಮಾನವನ್ನು ಖಾಜಾ ಪಡೆದುಕೊಂಡರು.
ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ತಾವುಗಳು ಕಡ್ಡಾಯವಾಗಿ ಚುನಾವಣೆಯಲ್ಲಿ ಮತವನ್ನು ಚಲಾಯಿಸಬೇಕು. ತಮ್ಮ ಸುತ್ತಲಿನ ಎಲ್ಲ ಮತದಾರರನ್ನು ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಪ್ರೇರೇಪಿಸಬೇಕೆಂದು ತಿಳಿಸಲಾಯಿತು. ಸಹಿ ಸಂಗ್ರಹಣೆ ಹಾಗೂ ಸೆಲ್ಫಿ ಬೂತ್‌ಗಳಲ್ಲಿ ಭಾವಚಿತ್ರಗಳನ್ನು ತೆಗೆದುಕೊಳ್ಳುವ ಮೂಲಕ ಯುವಕರು ನಮ್ಮ ದೇಶದ ಚುನಾವಣೆ ನಮ್ಮ ಹೆಮ್ಮೆ ಎಂದು ಸಾರಿದರು.ತಹಶೀಲ್ದಾರ್ ಜಿ.ಅನಿಲ್‌ಕುಮಾರ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಚ್.ಷಡಾಕ್ಷರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ಶಿಕ್ಷಣ ಸಂಯೋಜಕರಾದ ಸಿ.ಬಸವರಾಜ್, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಪರಶುರಾಮಪ್ಪ, ಸ್ವೀಪ್ ನೋಡಲ್ ಅಧಿಕಾರಿ ಜಿ.ಕೊಟ್ರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಚ್. ತಮ್ಮಪ್ಪ, ಆಟಗಾರರು ಉಪಸ್ಥಿತರಿದ್ದರು.