ಸುಳ್ಳು ಸುದ್ದಿ ಹರಡುವ ಬಿಜೆಪಿಗರಿಗೆ ಮತದಾರ ತಕ್ಕ ಉತ್ತರ

| Published : Nov 24 2024, 01:47 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡುವ ಮೂಲಕ ಸರ್ಕಾರ ಉಳಿಯುವುದೇ ಇಲ್ಲ ಎಂದು ಮಾತನಾಡಿದರು. ಆದರೆ, ಜಾಗೃತ ಮತದಾರ ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿಯವರಿಗೆ ಸಮರ್ಪಕ ಉತ್ತರ ನೀಡಿದ್ದಾನೆ

ಗದಗ: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸುಳ್ಳು ಸುದ್ದಿ ಹರಡಿ, ಅದನ್ನೇ ಬಂಡವಾಳ ಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿಗರಿಗೆ ಮತದಾರರ ಕಪಾಳ ಮೋಕ್ಷ ಮಾಡಿದ್ದಾನೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದ ಮೂಲಕ ಜಾಗೃತ ಮತದಾರರು ಬಿಜೆಪಿಗೆ ತಕ್ಕ ಮಂಗಳಾರತಿ ಮಾಡಿದ್ದಾನೆ. ಸುಳ್ಳು ಪ್ರಚಾರ ನಡೆಸಿ, ಸಮಾಜ ಒಡೆಯುವ ಹುನ್ನಾರ ನಡೆಸಿದವರಿಗೆ ತಕ್ಕ ಉತ್ತರ ಸಿಕ್ಕಂತಾಗಿದೆ. ಉಪ ಚುನಾವಣೆಗಳು ಘೋಷಣೆ ಆಗುತ್ತಿದ್ದಂತೆ ಬಿಜೆಪಿಯರು ಸುಳ್ಳು ಪ್ರಚಾರ ಆರಂಭಿಸಿದರು. ವಕ್ಫ್‌ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನ ಮಾಡಿದರು. ಗ್ಯಾರಂಟಿಗಳನ್ನು ನಿಲ್ಲಿಸಿಯೇ ಬಿಡುತ್ತಾರೆ ಎಂದು ಸುಳ್ಳು ಹೇಳಿದರು. ಪ್ರಧಾನಮಂತ್ರಿಗಳಿಂದಲೂ ಅದೇ ಸುಳ್ಳನ್ನು ಹೇಳಿಸಿದರು. ಸಿಎಂ ಸಿದ್ದರಾಮಯ್ಯ ಅವರನ್ನು ತೇಜೋವಧೆ ಮಾಡುವ ಮೂಲಕ ಸರ್ಕಾರ ಉಳಿಯುವುದೇ ಇಲ್ಲ ಎಂದು ಮಾತನಾಡಿದರು. ಆದರೆ, ಜಾಗೃತ ಮತದಾರ ಚುನಾವಣಾ ಫಲಿತಾಂಶದ ಮೂಲಕ ಬಿಜೆಪಿಯವರಿಗೆ ಸಮರ್ಪಕ ಉತ್ತರ ನೀಡಿದ್ದಾನೆ ಎಂದರು.

ಮೋದಿ ಹಾಗೂ ಶಾ ಅವರೇ ನಿಮ್ಮ ಸುಳ್ಳು ಹೇಳುವ ಪ್ರವೃತ್ತಿ ಕರ್ನಾಟಕದ ಜನ ಒಪ್ಪುವುದಿಲ್ಲ, ಈ ಹಿಂದೆಯೂ ಒಪ್ಪಿಲ್ಲ,ಈಗಲೂ ಒಪ್ಪಿಲ್ಲ, ನಮ್ಮ ರಾಜ್ಯದಲ್ಲಿ ಸುಳ್ಳುಗಳು ನಡೆಯುವುದಿಲ್ಲ ಎಂಬುದನ್ನು ಬಿಜೆಪಿ ಇನ್ನಾದರೂ ಅರ್ಥೈಸಿಕೊಳ್ಳಬೇಕು. ನಮ್ಮ ಈ ಗೆಲುವು ಸಮಾಜ ಒಡೆಯುವ ಕೆಟ್ಟ ಶಕ್ತಿಗಳಿಗೆ ತಕ್ಕ ಶಾಸ್ತಿ ಮಾಡಿದೆ ಎಂದರು.

ಸಿದ್ಧರಾಮಯ್ಯ ನಾಯಕತ್ವ ಗಟ್ಟಿ: ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿರುವುದು, ಸಿದ್ದರಾಮಯ್ಯ ನಾಯಕತ್ವ ಮತ್ತಷ್ಟು ಗಟ್ಟಿಗೊಳಿಸಿದೆ. ಸಿಎಂ ಅವರನ್ನು ಅಶಕ್ತರನ್ನಾಗಿಸುವ ಬಿಜೆಪಿಯ ರಾಜಕೀಯ ಕುತಂತ್ರಕ್ಕೆ ಸೋಲಾಗಿದೆ. ಸಿದ್ದರಾಮಯ್ಯ ಜನತಾ ನಿರ್ಣಯದ ಮೂಲಕ ಮತ್ತೊಮ್ಮೆ ಜನಮೆಚ್ಚಿದ ನಾಯಕರು ಎನ್ನುವುದು ಸಾಬೀತಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ನಾವು ಬಡವರ ಮನಸ್ಸು, ಮನೆ ಮುಟ್ಟಿದ್ದೇವೆ ಎನ್ನುವುದಕ್ಕೆ ಈ ಫಲಿತಾಂಶ ಉತ್ತಮ ಉದಾಹರಣೆಯಾಗಿದೆ ಎಂದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹಣ ಹೊಳೆ, ಅಧಿಕಾರದ ದುರುಪಯೋಗ ಕುರಿತ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಅವರು, ಹಣ ಹಂಚಿದ್ದೇ ಆಗಿದ್ದರೆ ಚುನಾವಣೆ ನಡೆದ ಕ್ಷೇತ್ರ ವ್ಯಾಪ್ತಿಯ ಯಾವುದಾದರೂ ಠಾಣೆಗಳಲ್ಲಿ ದೂರು ದಾಖಲಾಗುತ್ತಿತ್ತು. ಚುನಾವಣಾ ಆಯೋಗದ ಗಮನಕ್ಕೆ ಬರುತ್ತಿತ್ತು. ಇದೇ ಬಿಜೆಪಿಯವರು ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಸೋಲಿನ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ ಎಂದು ಹೇಳಿದ್ದೇ ಹೇಳಿದ್ದೇ, ಈಗ ಅದೇ ಬಿಜೆಪಿಯವರೇ ಈ ರೀತಿ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.