ಕೇಂದ್ರ ಸರ್ಕಾರ ಜನರ ಮತದಾನ ಹಕ್ಕು ಕಸಿಯುವ ಯತ್ನ ಮಾಡುತ್ತಿದ್ದು, ಮತದಾರರ ಪರಿಷ್ಕರಣೆ ಮೂಲಕ ಏಳು ಕೋಟಿ ಮತದಾರರ ಹಕ್ಕು ಕಸಿದಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಟಿ.ಬಿ. ಜಯಾನಂದಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕೇಂದ್ರ ಸರ್ಕಾರ ಜನರ ಮತದಾನ ಹಕ್ಕು ಕಸಿಯುವ ಯತ್ನ ಮಾಡುತ್ತಿದ್ದು, ಮತದಾರರ ಪರಿಷ್ಕರಣೆ ಮೂಲಕ ಏಳು ಕೋಟಿ ಮತದಾರರ ಹಕ್ಕು ಕಸಿದಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಅಧ್ಯಕ್ಷ ಟಿ.ಬಿ. ಜಯಾನಂದಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಮುಂಭಾಗ ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಎಸ್‌ಐಆರ್ ರದ್ದುಗೊಳಿಸಬೇಕು. ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರವರನ್ನು ವಜಾ ಗೊಳಿಸಬೇಕು ಹಾಗೂ ಮತದಾರರ ಪಟ್ಟಿಯನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕೋಟಿ ಏಳು ಲಕ್ಷ ಮತದಾರರ ಹೆಸರು ಕಳೆದು ಹೋಗಿದೆ. ಚುನಾವಣೆ ಹತ್ತಿರ ಬಂದಾಗ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಮತದಾನದ ಹಕ್ಕು ಕಸಿಯುವ ಕೆಲಸ ಮಾಡುತ್ತಿವೆ. ಈ ಮೂಲಕ ವಿರೋಧ ಪಕ್ಷಗಳ ಶಕ್ತಿ ಕುಂದಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್ ಎಸ್ ಚನ್ನಬಸವಯ್ಯ ಮಾತನಾಡಿ ಕೇಂದ್ರ ಸರ್ಕಾರ ಹೊರದೇಶದಿಂದ ಬಂದಿರುವವರ ಮತದ ಹಕ್ಕನ್ನು ವಜಾ ಮಾಡಿದ್ದೇವೆ ಎನ್ನುತ್ತಿದೆ. ಆದರೆ ಕಳೆದ ೧೪ ವರ್ಷದಿಂದ ಕೇಂದ್ರ ಸರ್ಕಾರ ಅಧಿಕಾರದಲ್ಲಿದೆ. ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ ಎಂಬ ಕಾರಣಕ್ಕಾಗಿ, ಉದ್ದೇಶ ಪೂರ್ವಕವಾಗಿ ದೇಶದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.

ರೈತ ಸಂಘದ ಹಸಿರು ಸೇನೆ ಮುಖಂಡ ತಿಮ್ಲಾಪುರ ದೇವರಾಜು ಮಾತನಾಡಿ, ದೇಶದಲ್ಲಿ ಮತದಾನದ ಹಕ್ಕನ್ನು ಚುನಾವಣಾ ಆಯೋಗ ಕಿತ್ತುಕೊಳ್ಳುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಪ್ರಶ್ನೆ ಮಾಡಬೇಕು. ಈ ಕೂಡಲೇ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶ್ರೀಕಾಂತ್ ಕೆಳಹಟ್ಟಿ, ರಾಜಮ್ಮ, ಪಾರ್ವತಮ್ಮ, ತಿಮ್ಮೇಗೌಡ, ರಾಜಪ್ಪ, ಅಲ್ಲಬಕಾಶ್, ಶಫಿವುಲ್ಲಾ, ಪ್ಯಾರಜಾನ್, ಸಮಿಉಲ್ಲಾ, ತಾಸಿನ್ ಶರೀಫ್, ಮಲ್ಲಿಕಾರ್ಜುನ್, ಬಸವರಾಜು, ಲೋಕೇಶ್, ಜಕ್ಕನಹಳ್ಳಿ ಮೋಹನ್ ಸೇರಿದಂತೆ ಮತ್ತಿದ್ದರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.