ನಗರದ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಜಾಥಾಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮತಗಟ್ಟೆ ಅಧಿಕಾರಿಗಳು ನೀಡುವ ಎನ್ಯೂಮರೇಶನ್ ಫಾರಂ ನಲ್ಲಿ ನಿಖರ ಮಾಹಿತಿ ಭರ್ತಿ ಮಾಡಿ, ವಾಪಾಸ್ ನೀಡಬೇಕು. ಈ ವೇಳೆ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ತಿಳಿಸಿದರು.ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ಹನುಮಂತಪ್ಪ ವೃತ್ತದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಮತದಾರರ ಪಟ್ಟಿಯನ್ನು ಅತ್ಯಂತ ನಿಖರವಾಗಿ ಹಾಗೂ ದೋಷ ರಹಿತವಾಗಿ ರೂಪಿಸುವ ನಿಟ್ಟಿನಲ್ಲಿ ಜೂ. 30 ರಿಂದ ಜು. 29 ರವರೆಗೆ ಜಿಲ್ಲಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-ಎಸ್‌ಐಆರ್-2026 ಹಮ್ಮಿಕೊಳ್ಳಲಾಗಿದೆ. ಈ ವೇಳೆ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಖುದ್ದಾಗಿ ಭೇಟಿ ನೀಡಲಿದ್ದಾರೆ. 2025ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತ ದಾರರ ಮನೆಗೆ ತೆರಳಿ ಎರಡು ‘ಫಾರಂ’ ನೀಡಲಿದ್ದಾರೆ. ಸಾರ್ವಜನಿಕರು ಈ ನಮೂನೆಯಲ್ಲಿ ತಮ್ಮ ನಿಖರ ಮಾಹಿತಿ ಭರ್ತಿ ಮಾಡಬೇಕು ಎಂದು ತಿಳಿಸಿದರು.
ಫಾರಂ ಭರ್ತಿ ಮಾಡುವ ಈ ಹಂತದಲ್ಲಿ ಸಾರ್ವಜನಿಕರು ಯಾವುದೇ ಪೂರಕ ದಾಖಲಾತಿ ನೀಡುವ ಅಗತ್ಯವಿರುವುದಿಲ್ಲ. ಕೇವಲ ಮಾಹಿತಿ ಭರ್ತಿ ಮಾಡಿ ಅದರಲ್ಲಿ ಸಹಿ ಮಾಡಿ ಒಂದು ಪ್ರತಿಯನ್ನು ಬಿಎಲ್‌ಒಗೆ ಹಿಂದಿರುಗಿಸಬೇಕು. ಮತ್ತೊಂದು ಪ್ರತಿಯನ್ನು ನಿಮ್ಮ ಬಳಿಯೇ ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರನು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಮನವಿ ಮಾಡಿದರು.ಯಾವುದಾದರೂ ಕುಟುಂಬದ ಸದಸ್ಯರು ಉದ್ಯೋಗ ಅಥವಾ ಇತರೆ ಕೆಲಸದ ನಿಮಿತ್ತ ತಾತ್ಕಾಲಿಕವಾಗಿ ಊರಿನಿಂದ ಹೊರಗಿದ್ದರೆ ಮನೆಯಲ್ಲಿರುವ ಅವರ ಸಹೋದರ, ಸಹೋದರಿ ಅಥವಾ ಪೋಷಕರು ಆ ವ್ಯಕ್ತಿಯೊಂದಿಗಿನ ತಮ್ಮ ಸಂಬಂಧ ನಮೂದಿಸಿ, ಸಹಿ ಮಾಡುವ ಮೂಲಕ ಮಾಹಿತಿ ನೀಡಬಹುದು ಎಂದರು.
ನಗರದ ಹನುಮಂತಪ್ಪ ವೃತ್ತದಿಂದ ಪ್ರಾರಂಭವಾದ ಎಸ್‌ಐಆರ್ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳ ಮೂಲಕ ಆಜಾದ್ ಪಾರ್ಕ್‌ವರೆಗೂ ಜಾಥಾ ನಡೆಯಿತು. ಜಾಥಾದಲ್ಲಿ ತಹಸೀಲ್ದಾರ್ ರೇಷ್ಮಾಶೆಟ್ಟಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಪ್ರಬಾರಿ) ನಾಗರಾಜ್ ರಾವ್ ಕಲ್ಕಟ್ಟೆ, ಜಿಪಂ (ಆಡಳಿತ) ಸಹಾಯಕ ಕಾರ್ಯದರ್ಶಿ ನಯನಾ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಕಾಂತರಾಜು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.---ಬಾಕ್ಸ್---
ಮತದಾರ ಸಹಾಯ ಕೇಂದ್ರ ಸ್ಥಾಪನೆಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ಮಾಹಿತಿ ಅಗತ್ಯವಿದ್ದಲ್ಲಿ ಬಿಎಲ್‌ಒಗಳನ್ನು ಸಂಪರ್ಕಿಸಬಹುದು. ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕಚೇರಿಗಳಲ್ಲಿ ‘ಮತದಾರರ ಸಹಾಯ ಕೇಂದ್ರ’ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಬೂತ್ ಮಟ್ಟದ ಏಜೆಂಟರುಗಳು ಕೂಡ ಈ ನಿಟ್ಟಿನಲ್ಲಿ ನೆರವಾಗಲಿದ್ದಾರೆ ಎಂದು ಎಚ್.ಎಸ್.ಕೀರ್ತನಾ ತಿಳಿಸಿದರು. (ಕೀರ್ತನಾ ಫೋಟೋ ಬಳಸಿ)