ಸಾರಾಂಶ
ಹಾಲಿ ಸಂಸದರನ್ನು ಆರು ಬಾರಿ ಜನರು ಗೆಲ್ಲಿಸಿದರು. ಆದರೆ ಸಂಸದರು ಸದನದಲ್ಲಿ ಒಮ್ಮೆಯೂ ಕ್ಷೇತ್ರದ ಸಮಸ್ಯೆಗಳ ಬಗ್ಗೆಯಾಗಲಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ತುಟಿ ಬಿಚ್ಚಲಿಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಟೀಕಿಸಿದರು.
ಹಳಿಯಾಳ: ಮತದಾರರು ಅಭ್ಯರ್ಥಿಯ ಚಾರಿತ್ರ್ಯ ಗಮನಿಸಬೇಕು. ಅಭ್ಯರ್ಥಿಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕೆ ಹೊರತು ಅಂಧಶ್ರದ್ಧೆಯಿಂದ ಮತ ಚಲಾಯಿಸಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮನವಿ ಮಾಡಿದರು.
ಶುಕ್ರವಾರ ತೇರಗಾಂವ ಜಿಪಂ ಕ್ಷೇತ್ರ ಮತ್ತು ಮುರ್ಕವಾಡ ಜಿಪಂ ಕ್ಷೇತ್ರದ ತೇರಗಾಂವ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಾಲಿ ಸಂಸದರು ನನ್ನ ಆತ್ಮೀಯ ಸ್ನೇಹಿತರು. ಆರು ಬಾರಿ ಅವರನ್ನು ಜನರು ಗೆಲ್ಲಿಸಿದರು. ಆದರೆ ಸಂಸದರು ಸದನದಲ್ಲಿ ಒಮ್ಮೆಯೂ ಕ್ಷೇತ್ರದ ಸಮಸ್ಯೆಗಳ ಬಗ್ಗೆಯಾಗಲಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ತುಟಿ ಬಿಚ್ಚಲಿಲ್ಲ. ಕೇಂದ್ರದಲ್ಲಿ ಅವರದೇ ಮೋದಿ ಸಾಹೇಬರ ಸರ್ಕಾರ ಇದ್ದರೂ ಒಂದೇ ಒಂದು ಜನಪರವಾದ ಯೋಜನೆಗಳನ್ನು ತರಲಿಲ್ಲ ಎಂದರು.ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿ: ಕಾಂಗ್ರೆಸ್‌ಗೆ ಮಹಿಳೆಯರ ಮೇಲೆ ಹೆಚ್ಚಿನ ಕಾಳಜಿ. ಅದಕ್ಕಾಗಿ ಮಹಿಳೆಯರ ಹಿತರಕ್ಷಣೆಯ ದೃಷ್ಟಿಯಲ್ಲಿ ಪಂಚ ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೊಳಿಸಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದ ನಂತರ ಕಳೆದ ಫೆಬ್ರವರಿ ತಿಂಗಳಿನವರೆಗೆ ಗೃಹಜ್ಯೋತಿ ಯೋಜನೆಯಲ್ಲಿ 1.51 ಕೋಟಿ ಫಲಾನುಭವಿಗಳು, ಗೃಹಲಕ್ಷ್ಮಿ ಯೋಜನೆಯಲ್ಲಿ 1.17 ಕೋಟಿ ಫಲಾನುಭವಿಗಳು, ಅನ್ನಭಾಗ್ಯ ಯೋಜನೆಯಲ್ಲಿ 4 ಕೋಟಿ ಫಲಾನುಭವಿಗಳು, ಶಕ್ತಿ ಯೋಜನೆಯಲ್ಲಿ 3.50 ಕೋಟಿ ಫಲಾನುಭವಿಗಳು ಲಾಭವನ್ನು ಪಡೆದುಕೊಂಡಿದ್ದು, ಯುವನಿಧಿ ಯೋಜನೆಯಲ್ಲೂ ಸಾಕಷ್ಟು ವಿದ್ಯಾವಂತರು ಪ್ರಯೋಜವನ್ನು ಪಡೆಯುತ್ತಿದ್ದಾರೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ತೇರಗಾಂವ ಗ್ರಾಪಂ ಅಧ್ಯಕ್ಷೆ ಜರೀನಾ ಅನ್ವರ ಪುಂಗಿ, ಕಾಂಗ್ರೆಸ್ ಮುಖಂಡ ಎಸ್.ಜಿ. ಮಾನಗೆ, ಬಿ.ಡಿ. ಚೌಗಲೆ ಹಾಗೂ ತೇರಗಾಂವ ಸಹಕಾರಿ ಸಂಘದ ಅಧ್ಯಕ್ಷ ಗುಂಡು ಕಕ್ಕೇರಿ ಇದ್ದರು.