ಮತದಾನ ಜಾಗೃತಿ: ಇಂದು ಬೃಹತ್‌ ಬೈಕ್ ಜಾಥಾ

| Published : May 03 2024, 01:07 AM IST

ಸಾರಾಂಶ

ಮತದಾನದ ಜಾಗೃತಿಗಾಗಿ ಯಾದಗಿರಿ ನಗರದ ಪ್ರಮುಖ ಬೀದಿಗಳಲ್ಲಿ ಸ್ವೀಪ್ ಸಮಿತಿಯಿಂದ ಮೇ 3ರಂದು ಶುಕ್ರವಾರ ಬೈಕ್ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ

ಕನ್ನಡಪ್ರಭ ವಾರ್ತೆ, ಯಾದಗಿರಿ

ಮತದಾನದ ಜಾಗೃತಿಗಾಗಿ ಯಾದಗಿರಿ ನಗರದ ಪ್ರಮುಖ ಬೀದಿಗಳಲ್ಲಿ ಸ್ವೀಪ್ ಸಮಿತಿಯಿಂದ ಮೇ 3ರಂದು ಶುಕ್ರವಾರ ಬೈಕ್ ಜಾಥಾ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ ಅವರು ತಿಳಿಸಿದರು.

ಗುರುವಾರ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾ ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಈ ಹಿಂದಿನ ಚುನಾವಣೆಗಳಲ್ಲಿ ಕಡಮೆ ಮತದಾನವಾದ 120 ಮತಗಟ್ಟೆಗಳನ್ನು ಗುರುತಿಸಿ, ಅಧಿಕಾರಿಗಳನ್ನು ಅಂತಹ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ಕಳುಹಿಸಿ ಮತದಾನದ ಮಹತ್ವ ಸಾರಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ: ಜಿಲ್ಲೆಯಲ್ಲಿ ಎಲ್ಲ ನಗರ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ಮತದಾನದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದ ಗರೀಮಾ ಪನ್ವಾರ್‌, ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಲಾಗಿದೆ, ವಲಸೆ ಹೋಗುವ ಕೂಲಿ ಕಾರ್ಮಿಕರಿಗೆ ರೈಲ್ವೆ ನಿಲ್ದಾಣದಲ್ಲಿ ವಲಸೆ ಹೋಗದಂತೆ ಹಾಗೂ ಮತದಾನದ ದಿನದಂದು ಬಂದು ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು ಎಂದು ಅವರು ತಿಳಿಸಿದರು.