ಡಾ. ಶಿವಾನಂದ ಶ್ರೀಗಳಿಂದ ಮತದಾನದ ಜಾಗೃತಿ

| Published : Apr 08 2024, 01:01 AM IST / Updated: Apr 08 2024, 01:02 AM IST

ಸಾರಾಂಶ

ಭಾರತ ದೇಶ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಇಂಥ ದೇಶದಲ್ಲಿರುವ ಜನರಿಗೆ ಸಂವಿಧಾನ ಮತದಾನ ಎಂಬ ವಿಶೇಷ ಹಕ್ಕನ್ನು ನೀಡಿದೆ ಎಂದು ಕೊಣ್ಣೂರು ವಿರಕ್ತಮಠದ ಡಾ. ಶಿವಾನಂದ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ನರಗುಂದ

ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಆಲಸ್ಯತನ ಬಿಟ್ಟು ಎಲ್ಲೇ ಓಟಿಂಗ್ ಇದ್ದರೂ ಅಲ್ಲಿಗೆ ತೆರಳಿ ಮತ ಹಾಕಬೇಕು ಎಂದು ಕೊಣ್ಣೂರು ವಿರಕ್ತಮಠದ ಡಾ. ಶಿವಾನಂದ ಶ್ರೀಗಳು ಹೇಳಿದರು.

ಭಾನುವಾರ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ದುಡಿಯುವ ಕೂಲಿಕಾರರ ಸ್ಥಳಕ್ಕೆ ಹೋಗಿ ಕೂಲಿಕಾರರಿಗೆ ಮತದಾನ ಜಾಗೃತಿ ಮೂಡಿಸಿ ಆನಂತರ ಮಾತನಾಡಿದರು.

ಭಾರತ ದೇಶ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಇಂಥ ದೇಶದಲ್ಲಿರುವ ಜನರಿಗೆ ಸಂವಿಧಾನ ಮತದಾನ ಎಂಬ ವಿಶೇಷ ಹಕ್ಕನ್ನು ನೀಡಿದೆ. ಸಂವಿಧಾನ ನೀಡಿದ ಮತ ಹಕ್ಕನ್ನು ಚಲಾಯಿಸಿ ಲೋಕಸಭೆಗೆ ಅರ್ಹ ಸಂಸದರನ್ನು ಕಳುಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.ನಾನು ಬೆಂಗಳೂರಿನಲ್ಲಿ ಮತ ಹಾಕುವ ಹಕ್ಕನ್ನು ಹೊಂದಿದ್ದೇನೆ. ಆದರೆ, ಸಮಾಜ ಸೇವೆಗೆ ಅಂತ ಕೊಣ್ಣೂರಿನ ಗ್ರಾಮಕ್ಕೆ ಬಂದಿದ್ದೇನೆ. ಸದ್ಯ ಕೊಣ್ಣೂರಿನಲ್ಲಿದ್ದೇನೆ ಅಂತ ನನ್ನ ಮತದಾನ ಹಕ್ಕನ್ನು ನಾನು ಮರೆತಿಲ್ಲ. ಮತದಾನದ ದಿನ ಬೆಂಗಳೂರಿಗೆ ತೆರಳಿ ಮತ ಹಾಕುತ್ತೇನೆ. ಕೇವಲ ಎರಡು ನಿಮಿಷದ ಮತಹಾಕುವ ಕೆಲಸ ಅಂತ ನಾನು ಆಲಸ್ಯತನ ಪಟ್ಟಿಲ್ಲ. ಹಾಗೆಯೇ ನರೇಗಾ ಕೂಲಿಕಾರರು ತಮ್ಮ ಮತ ಚಲಾಯಿಸುವ ಹಕ್ಕು ಎಲ್ಲಿದೆಯೋ ಅಲ್ಲಿಗೆ ತೆರಳಿ ತಪ್ಪದೇ ಮತ ಹಾಕಿ ಬನ್ನಿ ಎಂದರು.

ಲೋಕಸಭೆ ಸದಸ್ಯತ್ವ ಸಾಮಾನ್ಯ ಸದಸ್ಯತ್ವ ಅಲ್ಲ. ದೇಶದ ಅಭಿವೃದ್ಧಿಗೆ, ಭದ್ರತೆಗೆ ತನ್ನದೇ ಕೊಡುಗೆ ನೀಡುವಂತ ಸದಸ್ಯತ್ವ ಅದು. ಇಂಥ ಸದಸ್ಯತ್ವವನ್ನು ಯೋಗ್ಯ ಅಭ್ಯರ್ಥಿ ಕೈಗೆ ಕೊಡುವ ಕೆಲಸವಾಗಬೇಕು. ಆ ಕೆಲಸವನ್ನು ಎಲ್ಲ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭೀತಿಯಿಂದ ತಮ್ಮ ಹಕ್ಕನ್ನು ಚಲಾಯಿಸಬೇಕು. ತಾಪಂ ಎಲ್ಲ ಮತದಾರರಿಗೂ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಅಂತ ಮೆಚ್ಚುಗೆ ವ್ಯಕ್ತಪಡಿಸಿದರು.

ಚುನಾವಣೆ ಜಾಗೃತಿ ಕಾರ್ಯಕ್ರಮದಲ್ಲಿ ತಾಪಂ ಅಧಿಕಾರಿ ಸೋಮಶೇಖರ ಬಿರಾದರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬೇಡಿ. ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಬಾರಿ ಯೋಗ್ಯ ಸಂಸದರ ಆಯ್ಕೆ ಮಾಡುವ ಜವಾಬ್ದರಿ ಮತದಾರನ ಮೇಲಿದೆ. ನಮ್ಮ ಮತವನ್ನು ನಾವು ಮಾರಿಕೊಂಡರೇ ಹೆತ್ತ ತಾಯಿಗೆ ಮಾಡಿದ ಅವಮಾನದಂತೆ. ಹೀಗಾಗಿ, ನಮ್ಮ ಮತ ಯೋಗ್ಯ ಅಭ್ಯರ್ಥಿಗೆ ಸಿಗುವಂತೆ ಆಗಬೇಕು ಎಂದು ತಿಳಿಸಿದರು.

ಎನ್.ಆರ್.ಎಲ್.ಎಂ. ಸಂಯೋಜಕ ಲಕ್ಷ್ಮಣ ಪೂಜಾರ ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ ಮಂಜುನಾಥ ಗಣಿ, ನರೇಗಾ ತಾಂತ್ರಿಕ ಸಂಯೋಜಕ ಹನುಮಂತ ಡಂಬಳ, ಗ್ರಾಮ ಕಾಯಕ ಮಿತ್ರ ಅನಸೂಯಾ ಕಬನೂರು, ಸಿಬ್ಬಂದಿ ಇದ್ದರು.