ಮಾಜಿ ದೇವದಾಸಿಯರಿಂದ ಮತದಾನ ಜಾಗೃತಿ

| Published : Apr 07 2024, 01:56 AM IST

ಸಾರಾಂಶ

ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲುಗಳ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾಜಿ ದೇವದಾಸಿಯರಿಂದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾನವ ಸರಪಳಿ ನಿರ್ಮಿಸಿ ಮತದಾನ ಸಂಕಲ್ಪ ಮಾಡಲಾಯಿತು.

ದಾವಣಗೆರೆ: ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮೆಟ್ಟಿಲುಗಳ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಾಜಿ ದೇವದಾಸಿಯರಿಂದ ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾನವ ಸರಪಳಿ ನಿರ್ಮಿಸಿ ಮತದಾನ ಸಂಕಲ್ಪ ಮಾಡಲಾಯಿತು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮತದಾರರ ಸಂಕಲ್ಪ ವಿಧಿಯನ್ನು ಬೋಧಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮ್ಮ ಹಕ್ಕು. 18 ವರ್ಷ ಮೇಲ್ಪಟ್ಟ ಮತದಾರರಾಗಿರುವ ಪ್ರತಿಯೊಬ್ಬರೂ ತಪ್ಪದೇ ಮೇ 7ರಂದು ಮತದಾನ ಮಾಡಿ ಶೇಖಡಾವಾರು ಹೆಚ್ಚಳವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವ ಯಶಸ್ಸಿಗಾಗಿ ಕೈಗೊಂಡ ಕರ್ತವ್ಯವಾಗುತ್ತದೆ ಎಂದರು.

85 ವರ್ಷ ವಯೋಮಾನದವರು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಇದೆ. ಅವರು ಇರುವ ಸ್ಥಳಗಳಿಗೆ ಬಂದು ಮತದಾನ ಮಾಡಿಸಲಾಗುವುದು. ದೇಶದ ಅಭಿವೃದ್ಧಿಗೆ ಒಂದೊಂದು ಮತವೂ ಮಹತ್ವದ್ದಾಗಿದ್ದು, ಈ ಬಗ್ಗೆ ತಾತ್ಸಾರ ಮಾಡದೆ ಸ್ವ-ಇಚ್ಛೆಯಿಂದ ಮತಗಟ್ಟೆಗೆ ತೆರಳಿ ಮತಚಲಾಯಿಸಬೇಕು. ಈ ಮೂಲಕ ನೆರೆಹೊರೆಯವರು ಸಹ ಮತದಾನ ಮಾಡಲು ಪ್ರೇರಣೆ ನೀಡಬೇಕು. ಮತಗಟ್ಟೆಗೆ ಆಗಮಿಸುವ ಎಲ್ಲರಿಗೂ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ವೀಪ್ ಸಮಿತಿಯ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಶಾರದ ದೊಡ್ಡಗೌಡ್ರು, ಇತರರು ಉಪಸ್ಥಿತರಿದ್ದರು.