ಸಾರಾಂಶ
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಿಣಿಗೇರಾ ಗ್ರಾಮದ ಹತ್ತಿರ ಇರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ನೌಕರರು, ಕಾರ್ಮಿಕರು ಮತದಾನ ಜಾಗೃತಿ ಜಾಥಾ ನಡೆಸಿದರು.
ಕೊಪ್ಪಳ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗಿಣಿಗೇರಾ ಗ್ರಾಮದ ಹತ್ತಿರ ಇರುವ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ನೌಕರರು, ಕಾರ್ಮಿಕರು ಮತದಾನ ಜಾಗೃತಿ ಜಾಥಾ ನಡೆಸಿದರು.
ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹನುಮಂತಪ್ಪ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಮಾನವ ಸಂಪನ್ಮೂಲ ಮುಖ್ಯಸ್ಥ ಪ್ರಭು ಕೊಪ್ಪದ ಜಾಥಾಕ್ಕೆ ಚಾಲನೆ ನೀಡಿದರು.ಹನುಮಂತಪ್ಪ ಮಾತನಾಡಿ, ಮೇ 7ರಂದು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವ ಮೂಲಕ ಸುಭದ್ರ ದೇಶ ನಿರ್ಮಾಣಕ್ಕೆ ಸಹಕರಿಸಬೇಕು. ಮತದಾನ ದಿನ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಕಾರ್ಖಾನೆಯ ಎಲ್ಲ ನೌಕರರು, ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಬೇಕು. ಮತದಾನ ಪವಿತ್ರ ಕಾರ್ಯ. ಮತದಾನ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.ಗಿಣಿಗೇರಾ ಗ್ರಾಮದ ಹೊಂಡಾ ಬೈಕ್ ಶೋರೂಮ್‌ನಿಂದ ಮೆರವಣಿಗೆ ಆರಂಭವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ವರೆಗೆ ಸಾಗಿತು. ನಮ್ಮ ಧ್ವನಿ, ನಮ್ಮ ಮತ, ನಮ್ಮ ಮತ ನಮ್ಮ ಹಕ್ಕು, ನಮ್ಮ ವೋಟ್ ನಮ್ಮ ಪವರ್, ನಮ್ಮ ಮತ ನಮ್ಮ ಆಯ್ಕೆ ಇತ್ಯಾದಿ ಘೋಷವಾಕ್ಯಗಳನ್ನು ಪ್ರದರ್ಶಿಸಲಾಯಿತು. ಆನಂತರ ಕಡ್ಡಾಯ ಮತದಾನ ಮಾಡಲು ಎಲ್ಲ ನೌಕರರು, ಕಾರ್ಮಿಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.ಜಾಥಾದಲ್ಲಿ 120ಕ್ಕೂ ಹೆಚ್ಚು ನೌಕರರು, ಕಾರ್ಮಿಕರು ತಮ್ಮ ಸಮವಸ್ತ್ರದೊಂದಿಗೆ ಭಾಗವಹಿಸಿ, ಮತದಾನ ಮಾಡುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು. ಆನಂತರ ಕಂಪನಿಯ ಆವರಣದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸ್ವೀಪ್ ಕಾರ್ಯಕ್ರಮದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ರವಿಕುಮಾರ, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ತಾಲೂಕು ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ವೀರೇಶ್ ಬಡಿಗೇರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ, ಕಾರ್ಯದರ್ಶಿ ಮಂಜುನಾಥ, ಡಿಇಒ ರಾಜು, ರಾಜಾಭಕ್ಷಿ, ಕರ ವಸೂಲಿಗಾರ ಈಶ್ವರಯ್ಯ, ಕಾಯಕ ಬಂಧುಗಳು, ಕಾರ್ಖಾನೆಯ ನೌಕರರು, ಕಾರ್ಮಿಕರು ಹಾಜರಿದ್ದರು.