ಮೊಂಬತ್ತಿ ಬೆಳಗಿ ಮತದಾನ ಜಾಗೃತಿ ಅಭಿಯಾನ

| Published : Apr 14 2024, 01:49 AM IST

ಸಾರಾಂಶ

ತಹಸೀಲ್ದಾರ್‌ ಪ್ರವೀಣ ಕರಾಂಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಮತದಾನವನ್ನು ಮೂಲಭೂತ ಹಕ್ಕನ್ನಾಗಿ ನೀಡಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಕುಮಟಾ

ತಾಲೂಕು ಸ್ವೀಪ್ ಸಮಿತಿ, ತಾಲೂಕು ಆಡಳಿತ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮತದಾನ ಜಾಗೃತಿ ಕುರಿತು ತಾಲೂಕು ಸೌಧದ ಎದುರು ಶುಕ್ರವಾರ ರಾತ್ರಿ ಮೊಂಬತ್ತಿಗಳನ್ನು ಬೆಳಗಿ ಜಾಗೃತಿ ಅಭಿಯಾನ ನಡೆಸಲಾಯಿತು. ಭಾರತದ ನಕಾಶೆಯಾಗಿ ಬೆಳಗುತ್ತಿದ್ದ ಮೊಂಬತ್ತಿಯ ಚಿತ್ರಣದೆದುರು ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗಿ ಪ್ರತಿಜ್ಞೆ ಸ್ವೀಕರಿಸಲಾಯಿತು.

ತಹಸೀಲ್ದಾರ್‌ ಪ್ರವೀಣ ಕರಾಂಡೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತದ ಸಂವಿಧಾನದಲ್ಲಿ ಮತದಾನವನ್ನು ಮೂಲಭೂತ ಹಕ್ಕನ್ನಾಗಿ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೂಕ್ತ ಸರ್ಕಾರವನ್ನು ರಚಿಸಲು ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದನ್ನು ಎಲ್ಲರೂ ಅರಿತು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ತಾಪಂ ಇಒ ರಾಜೇಂದ್ರ ಭಟ್ಟ ಮಾತನಾಡಿ, ಬೆಳಗುತ್ತಿರುವ ಮೊಂಬತ್ತಿಯಲ್ಲಿ ಭಾರತದ ನಕಾಶೆಯ ಚಿತ್ರಣವನ್ನು ಮೂಡಿಸಿ ಸಾಂಕೇತಿಕವಾಗಿ ಕಾರ್ಯಕ್ರಮದ ಮೂಲ ಉದ್ದೇಶವನ್ನು ಪ್ರೇರೇಪಿಸಲಾಗುತ್ತಿದೆ. ಪ್ರತಿಯೊಬ್ಬರೂ ಮತದಾನದ ಮೂಲಕ ಭಾರತವನ್ನು ಬೆಳಗಬೇಕು ಎಂಬ ಸಂದೇಶ ಇಲ್ಲಿದೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಭಾರತವನ್ನು ಬೆಳಗಬೇಕು. ಮುಖ್ಯವಾಗಿ ಹೊಸ ಮತದಾರರು ಇದನ್ನೆಲ್ಲಾ ಅರಿತು ಜಾಗೃತರಾಗಿರಬೇಕು ಎಂದರು.

ಪ್ರೊ. ಆನಂದು ನಾಯ್ಕ ಮಾತನಾಡಿ, ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ. ಮತದಾನವನ್ನು ಕಡ್ಡಾಯ ಎಂಬಂತೆ ನಾವು ಭಾವಿಸಿಕೊಳ್ಳಬೇಕು. ಯಾವುದೇ ಆಸೆ ಆಮಿಷಗಳಿಗೆ ಮತದಾನ ಮಾಡಬಾರದು. ಕಾನೂನು ಮತ್ತು ಚುನಾವಣೆ ನೀತಿ ಇಡೀ ದೇಶಕ್ಕೆ ಒಂದೇ ಆಗಿದ್ದು ಅದರ ಅನ್ವಯ ನಾವು ಬದುಕಬೇಕು ಮತ್ತು ಎಲ್ಲರೂ ಜಾಗೃತರಾಗಿ ಮತ ಚಲಾಯಿಸಿ ಎಂದರು.

ಅಕ್ಷರ ದಾಸೋಹ ಅಧಿಕಾರಿ ವಿನಾಯಕ ವೈದ್ಯ ಕಾರ್ಯಕ್ರವನ್ನು ಸಮಗ್ರವಾಗಿ ನಿರ್ವಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗಜಾನನ ಹೆಗಡೆ ಪ್ರತಿಜ್ಞಾವಿಧಿ ಬೋಧಿಸಿದರು. ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಜಿಲ್ಲಾ ಪಂಚಾಯತಿಯ ಗಣೇಶ ಗಾಂವ್ಕರ, ಸ್ವೀಪ್ ನೋಡಲ್ ಅಧಿಕಾರಿ ಭಾರತಿ ಆಚಾರಿ, ಸಮನ್ವಯಾಧಿಕಾರಿ ರೇಖಾ ನಾಯ್ಕ, ಸಿ.ಡಿ.ಪಿ.ಒ. ನಾಗರತ್ನಾ ನಾಯಕ ಇನ್ನಿತರರು ಇದ್ದರು.