ಜವಾಬ್ದಾರಿ ಅರಿತು ಮತದಾನ ಮಾಡಿ

| Published : Apr 22 2024, 02:19 AM IST

ಸಾರಾಂಶ

ಬಲಿಷ್ಠ ಪ್ರಜಾಪ್ರಭುತ್ವದ ಬುನಾದಿಗೆ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡಿದಲ್ಲಿ ಮಾತ್ರ ಸದೃಢ ಸರ್ಕಾರ ನೀಡಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೆಲ್ಲ ತಮ್ಮ ಹಕ್ಕು ಹಾಗೂ ಜವಾಬ್ದಾರಿಗಳನ್ನು ಅರಿತು ತಪ್ಪದೇ ಮತದಾನ ಮಾಡುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯ ನೇರಳೆ ಹೇಳಿದರು.

ನವನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ, ವಕೀಲರ ಸಂಘ, ನಗರಸಭೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡ ಮತದಾರರ ಜಾಗೃತಿ ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ನೂರಕ್ಕೆ ನೂರರಷ್ಟು ಮತದಾನವಾಗಬೇಕಾದರೆ ಅರ್ಹ ಮತದಾರರೆಲ್ಲ ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು ಎಂದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಶಶಿಧರ ಕುರೇರ ಮಾತನಾಡಿ, ದೇಶದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಬಲಿಷ್ಠ ಪ್ರಜಾಪ್ರಭುತ್ವ ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯವಾಗಿದೆ. ತಪ್ಪದೇ ಎಲ್ಲರೂ ಮತದಾನ ಮಾಡಬೇಕು. ಬಲಿಷ್ಠ ಪ್ರಜಾಪ್ರಭುತ್ವದ ಬುನಾದಿಗೆ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡಿದಲ್ಲಿ ಮಾತ್ರ ಸದೃಢ ಸರ್ಕಾರ ನೀಡಲು ಸಾಧ್ಯವಾಗುತ್ತದೆ. ಮತದಾನದ ಹಕ್ಕನ್ನು ಪಡೆದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವುದರ ಜೊತೆಗೆ ಇತರರನ್ನು ಮತದಾನ ಮಾಡುವಂತೆ ಮನವೊಲಿಸಬೇಕು ಎಂದು ಮನವಿ ಮಾಡಿದರು.

ಜಾಗೃತಿ ಜಾಥಾ ಜಿಲ್ಲಾ ನ್ಯಾಯಾಲಯದಿಂದ ಪ್ರಾರಂಭವಾಗಿ ನಗರಸಭೆಗೆ ಮುಕ್ತಾಯಗೊಂಡಿತು. ಜಾಥಾದಲ್ಲಿ ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು. ಜಾಥಾದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಮತದಾನ ಜಾಗೃತಿ ಸಂದೇಶವುಳ್ಳ ಟೋಪಿ ಹಾಗೂ ಟೀಶರ್ಟ್‌ ಧರಿಸಿ ಎಲ್ಲರ ಗಮನ ಸೆಳೆದರು. ನಗರಸಭೆ ಆವರಣದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ನೆರೆದ ಜನರ ಗಮನ ಸೆಳೆಯಲಾಯಿತು.

ಜಾಥಾದಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಸ್‌. ಬಿ.ರೆಹಮಾನ, ಜಿ.ಎ. ಮೂಲಿಮನಿ, ಪಲ್ಲವಿ ಆರ್‌, ಹೇಮಾ ಪಸ್ತಾಪೂರ, ದ್ಯಾವಪ್ಪ ಎಸ್.ಬಿ, ಮಹೇಶ ಪಾಟೀಲ, ಮುರಗೇಂದ್ರ ತುಬಾಕೆ, ಪ್ರಶಾಂತ ಚಟ್ನಿ ಎಸ್, ಕೃಷ್ಣಮೂರ್ತಿ ಪಡಸಲಗಿ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್‌, ವಕೀಲರ ಸಂಘದ ಅಧ್ಯಕ್ಷ ಕಾರ್ಯದರ್ಶಿ ಶ್ರೀಶೈಲ ಹಾವರಗಿ, ಜಿ.ಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಹಾಗೂ ನಗರಸಭೆ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

--

ಕೋಟ್..

ದೇಶದ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಬಲಿಷ್ಠ ಪ್ರಜಾಪ್ರಭುತ್ವ ಸದ್ಯದ ಪರಿಸ್ಥಿತಿಯಲ್ಲಿ ಅವಶ್ಯವಾಗಿದೆ. ತಪ್ಪದೇ ಎಲ್ಲರೂ ಮತದಾನ ಮಾಡಬೇಕು. ಬಲಿಷ್ಠ ಪ್ರಜಾಪ್ರಭುತ್ವದ ಬುನಾದಿಗೆ ಪ್ರತಿಯೊಬ್ಬ ನಾಗರಿಕರು ಮತದಾನ ಮಾಡಿದಲ್ಲಿ ಮಾತ್ರ ಸದೃಢ ಸರ್ಕಾರ ನೀಡಲು ಸಾಧ್ಯವಾಗುತ್ತದೆ.

ಶಶಿಧರ ಕುರೇರ.ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ

--

ಬಾಕ್ಸ್ . . .

ಮತದಾನ ಮಾಹಿತಿ ನೀಡುವ ಬೈಕ್‌

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕ ಬಸವರಾಜ ಬಾದೊಡಗಿ ವಿಶಿಷ್ಟವಾಗಿ ಮತದಾನ ಜಾಗೃತಿ ಮೂಡಿಸಿದರು. ತಮ್ಮ ಬೈಕ್‌ನಲ್ಲಿ ಇವಿಎಂ, ವಿವಿಪ್ಯಾಟ್ ಹಾಗೂ ಕಂಟ್ರೋಲ್ ಯುನಿಟ್ ಒಳಗೊಂಡ ಮಾಡೆಲ್‌ಗಳನ್ನು ಅಳವಡಿಸಿದ್ದಾರೆ. ಮತದಾನ ದಿನಾಂಕ, ನಮ್ಮ ಮತ ನಮ್ಮ ಹಕ್ಕು, ಮೈ ವೋಟ್‌ ಮೈ ರೈಟ್‌ ಹಾಗೂ ಸಂಸತ ಭವನದ ಚಿತ್ರ ಅಳವಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲು ವಿನೂತ ಪ್ರಯತ್ನ ಮಾಡಿದ್ದಾರೆ.