ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ತಮಗೆ ಸೂಕ್ತವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಸ್ವೀಪ್ ಸಮಿತಿಯ ಎಲ್ಲ ಸದಸ್ಯರು ಮತದಾನ ಕುರಿತು ಜಾಗೃತಿ ಮೂಡಿಸಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಡಾ.ಎಂ. ಕೃಷ್ಣಾರಾಜ ಹೇಳಿದರು.ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನ ಕುರಿತು ಸ್ವೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಮತವೂ ಅತ್ಯಮೂಲ್ಯ ಎಂಬ ತಾತ್ವಿಕ ನೆಲಗಟ್ಟಿನಡಿ ಭವಿಷ್ಯದ ಮತದಾರರು, ನೂತನ ಮತದಾರರು ಮತ್ತು ನೋಂದಣಿರಹಿತ ಯುವ ಮತದಾರರನ್ನು ಗುರಿಯಾಗಿಸಿಕೊಂಡು ಎಲ್ಲ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆ, ಕಾಲೇಜು ಮತ್ತು ಯುವ ಮತದಾರರಲ್ಲಿ ಚುನಾವಣೆ ಹಾಗೂ ಮತದಾನ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರ ಮತ ಚಲಾಯಿಸಬೇಕು. ಒಂದೊಂದು ಮತವೂ ಅಮೂಲ್ಯವಾಗಿದ್ದು, ಯಾರೂ ಮತದಾನದಿಂದ ವಂಚಿತರಾಗಬಾರದು. ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಿ ಜೊತೆಗೆ ನಿಮ್ಮ ಮನೆಯ ಅಕ್ಕಪಕ್ಕದವರಿಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಿ, ಮತದಾನದ ಕುರಿತು ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು. ವಿಭಿನ್ನವಾಗಿ ಜನರಿಗೆ ಮತದಾನದ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಮತದಾನದ ಜಾಗೃತಿ ಅಭಿಯಾನ ಸೆಲ್ಪಿ ಸ್ಯ್ಟಾಂಡ್, ಸಹಿ ಅಭಿಯಾನ ಮತ್ತು ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಮೂಲಕ ಸ್ವೀಪ್ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಗ್ರೇಡ್ -2 ತಹಸೀಲ್ದಾರ್ ಬಿ.ವೈ. ಹೊಸಕೇರಿ, ಸೇರಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.