ಕಂಪನಿ ಕಾರ್ಮಿಕರಿಗೆ ಮತದಾನ ಜಾಗೃತಿ

| Published : Apr 27 2024, 01:00 AM IST

ಸಾರಾಂಶ

ಮೇ.7ಕ್ಕೆ 2 ನೇ ಹಂತದ ಚುನಾವಣೆ । ತಪ್ಪದೇ ಮತದಾನ ಮಾಡಲು ಅಧಿಕಾರಿಗಳ ಕರೆ

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯ ಮುಂಡರಗಿ ಮೇಘಾ ಕಾಂಟ್ರಾಕ್ಷನ್ಸ್ ಕಂಪನಿ, ಸೈದಾಪೂರ ರಾಯಲ ಸೀಮಾ ಕಾಂಕ್ರಿಟ್ ಸ್ಲಿಪರ್ ಲಿಮಿಟೆಡ್ ಕಂಪನಿ, ನೀಲಹಳ್ಳಿ ಬೃಂದವನ್ ಕಾಂಟ್ರಾಕ್ಷನ್ಸ್ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಅಂತಿಮ ನಿರ್ಣಾಯಕರಾಗಿದ್ದು, ಮೇ.7 ರಂದು ನಡೆಯುವ ಲೋಕಸಭಾ ಚುನಾವಣೆಗೆ ತಪ್ಪದೇ ಮತದಾನ ಮಾಡಬೇಕೆಂದು ಯಾದಗಿರಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಕರೆ ನೀಡಿದರು.ಮತದಾನ ಸಂಭ್ರಮವಾದಾಗ ಮಾತ್ರ ದೇಶ ಬದಲಾಗುತ್ತದೆ. ಎಲ್ಲರೂ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ, ನಿಮ್ಮ ಮತ ನಿಮ್ಮ ಹಕ್ಕಾಗಿದ್ದು, ನಿಮ್ಮ ಒಂದು ಮತದಿಂದ ದೇಶದ ಭವಿಷ್ಯ ಅಡಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ಪ್ರಜೆಗಳು ಮತದಾನ ಮಾಡುವ ಮೂಲಕ ದೇಶದ ಸುಭದ್ರವಾದ ಸರ್ಕಾರವನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

ಕಂಪನಿಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಕೆಲಸದ ಒತ್ತಡದಿಂದ ಮತದಾನ ದಿನದಂದು ಯಾರೂ ಹೊರಗುಳಿಯುವಂತಿಲ್ಲ. ಚುನಾವಣಾ ಆಯೋಗವು ಮೇ.7 ವೇತನ ಸಹಿತ ರಜೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಮೇ.7 ರಂದು ಕಡ್ಡಾಯವಾಗಿ ಮತದಾನ ಮಾಡುತ್ತೇನೆ ಎಂದು ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಹೊನ್ನೂರ, ಸಿಬ್ಬಂದಿಗಳಾದ ದೀಪಕ್‌ಸಿಂಗ್, ಶಿವರಾಜನಾಯಕ ಆರ್.ಎನ್ ಕಾಂಟ್ರಾಕ್ಷನ್ಸ್ ಕಂಪನಿಯ ಆಡಳಿತ ವರ್ಗದವರಿದ್ದರು.