ಪುತ್ತೂರು ಅಂಚೆ ವಿಭಾಗದಿಂದ ಮತದಾನ ಜಾಗೃತಿ ಜಾಥಾ

| Published : Apr 04 2024, 01:01 AM IST

ಸಾರಾಂಶ

ನಗರದ ಪ್ರಧಾನ ಅಂಚೆ ಕಚೇರಿಯಿಂದ ಆಡಳಿತ ಸೌಧವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಾಪಸ್‌ ಅಂಚೆ ಕಚೇರಿಯಲ್ಲಿ ಜಾಗೃತಿ ಜಾಥಾ ಸಮಾಪನಗೊಂಡಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಭಾರತೀಯ ಅಂಚೆ ಇಲಾಖೆ, ಪುತ್ತೂರು ಅಂಚೆ ವಿಭಾಗದ ವತಿಯಿಂದ ಸಾರ್ವತ್ರಿಕ ಲೋಕ ಸಭಾ ಚುನಾವಣೆ ೨೦೨೪ರ ಅಂಗವಾಗಿ ಸ್ವೀಪ್ ಕಾರ್ಯಕ್ರಮದಡಿ ಮತದಾರರಲ್ಲಿ ಜಾಗೃತಿ ಜಾಥಾ ಬುಧವಾರ ಪುತ್ತೂರು ನಗರದಲ್ಲಿ ನಡೆಯಿತು.

ನಗರದ ಪ್ರಧಾನ ಅಂಚೆ ಕಚೇರಿಯಿಂದ ಆಡಳಿತ ಸೌಧವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಾಪಸ್‌ ಅಂಚೆ ಕಚೇರಿಯಲ್ಲಿ ಜಾಗೃತಿ ಜಾಥಾ ಸಮಾಪನಗೊಂಡಿತು. ಪುತ್ತೂರು ಅಂಚೆ ವಿಭಾಗದ ಅಧಿಕಾರಿ, ಸಿಬ್ಬಂದಿ ವರ್ಗ ಬಿಳಿ ಬಣ್ಣದ ಬಟ್ಟೆ ಧರಿಸಿ ಮತದಾರ ಜಾಗೃತಿ ಕುರಿತು ಘೋಷ ವಾಕ್ಯಗಳನ್ನು ಕೈಯಲ್ಲಿ ಹಿಡಿದು, ವಾಹನದಲ್ಲಿ ಮೈಕ್ ಮೂಲಕ ಮತದಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಆಡಳಿತ ಸೌಧದ ಮುಂಭಾಗ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಜಿ. ಹರೀಶ್, ಉಪ ಅಂಚೆ ಅಧೀಕ್ಷಕಿ ಉಷಾ ಕೆ.ಆರ್., ಸಹಾಯಕ ಅಂಚೆ ಅಧೀಕ್ಷರಾದ ಚಂದ್ರ ನಾಯ್ಕ್, ಗಣಪತಿ ಎಂ, ಪ್ರಧಾನ ಅಂಚೆ ಪಾಲಕಿ ವಸಂತಿ, ತಾ.ಪಂ. ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಪುತ್ತೂರು ಅಂಚೆ ವಿಭಾಗದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.