ಶಿರಹಟ್ಟಿಯಲ್ಲಿ ಮತದಾನ ಜಾಗೃತಿ ಜಾಥಾ, ಮಾನವ ಸರಪಳಿ

| Published : Apr 09 2024, 12:46 AM IST

ಸಾರಾಂಶ

ಮತದಾನ ಜಾಗೃತಿ ಹಿನ್ನೆಲೆಯಲ್ಲಿ ಶಿರಹಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ಈ ವೇಳೆ ಮಾನವ ಸರಪಳಿ ಸರಪಳಿ ರಚಿಸಲಾಯಿತು.

ಶಿರಹಟ್ಟಿ: ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಹಕ್ಕನ್ನು ನೀಡಿದ್ದು, ಕಡ್ಡಾಯವಾಗಿ ಅರ್ಹರೆಲ್ಲರೂ ಮತದಾನ ಮಾಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಪ್ರಶಾಂತರಾವ್ ಕರೆ ನೀಡಿದರು.

ಭಾರತ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಶಿರಹಟ್ಟಿ ತಾಲೂಕು ಸ್ವೀಪ್ ಸಮಿತಿ, ಶಿರಹಟ್ಟಿ ತಾಪಂ ಸಹಯೋಗದಲ್ಲಿ ಸೋಮವಾರ ಶಿರಹಟ್ಟಿ ಪಟ್ಟಣದಲ್ಲಿ ೨೦೨೪ರ ಲೋಕಸಭಾ ಚುನಾವಣಾ ನಿಮಿತ್ತ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚುನಾವಣೆಯಲ್ಲಿ ನಿರ್ಭೀತಿಯಿಂದ ಮತದಾನ ಮಾಡುವ ಮೂಲಕ ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ವಯಸ್ಸು ೧೮ ವರ್ಷ ಪೂರೈಸಿದ ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಸಂವಿಧಾನ ಮತದಾನದ ಹಕ್ಕು ನೀಡಿದೆ. ಸಂವಿಧಾನಬದ್ಧ ಹಕ್ಕು ಚಲಾಯಿಸುವ ಮೂಲಕ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು ಎಂದರು.

ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮತದಾನದ ದಿನ ಕಡ್ಡಾಯವಾಗಿ ತಮ್ಮ ಮತಗಟ್ಟೆಗೆ ತೆರಳಿ ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು. ಯಾರೂ ಮತ ಚಲಾಯಿಸದೇ ಹೊರಗುಳಿಯಬಾರದು. ನಿಮ್ಮ ಮನೆಯ ಅಕ್ಕ-ಪಕ್ಕದವರು ನಗರಗಳಿಗೆ ವಲಸೆ ಹೋಗಿದ್ದರೆ ಅವರೂ ಮತ ಚಲಾಯಿಸಲು ಊರಿಗೆ ಬರುವಂತೆ ತಿಳಿಸಬೇಕು ಎಂದು ಮತದಾನ ಜಾಗೃತಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ್ ಮಾತನಾಡಿ, ಮತ ಹಾಕುವುದು ನಮ್ಮೆಲ್ಲರ ಹಕ್ಕು. ಪ್ರತಿಯೊಬ್ಬರ ಮತವೂ ಅಮೂಲ್ಯವಾಗಿದೆ. ಹಾಗಾಗಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಚುನಾವಣೆಗಳಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕಾಗಿದೆ. ಎಲ್ಲರೂ ತಪ್ಪದೇ ಪವಿತ್ರವಾದ ಮತ ಚಲಾಯಿಸಬೇಕು. ನಿಮ್ಮ ಮತ ನಿಮ್ಮ ಆಯ್ಕೆ, ನಿಮ್ಮ ಆಯ್ಕೆಯನ್ನು ಯಾರು ನಿರ್ಬಂಧಿಸಲಾರರು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದರು.

ಮತದಾನ ಜಾಗೃತಿಗೆ ಜಾಥಾ ನಡೆಸಲಾಯಿತು. ಬಸವೇಶ್ವರ ವೃತ್ತದಿಂದ ಪ್ರಾರಂಭಿಸಿ ಗಾಂಧಿ ವೃತ್ತ, ವಾಲ್ಮೀಕಿ ಸರ್ಕಲ್ ಮೂಲಕ ನೆಹರು ಸರ್ಕಲ್ ತಲುಪಿ ಕೊನೆಗೆ ತಹಸೀಲ್ದಾರ್‌ ಕಚೇರಿಗೆ ಜಾಥಾ ತಲುಪಿತು. ಮಾನವ ಸರಪಳಿ ನಿರ್ಮಿಸಲಾಯಿತು.

ಜಿಲ್ಲಾ ದೈಹಿಕ ಪರಿವೀಕ್ಷಕ ಎಂ.ಎಂ. ಹವಳದ, ಬಿ.ಎಸ್. ಭಜಂತ್ರಿ, ಎಂ.ಜಿ. ಮಾಂಡ್ರೆ, ಎನ್.ಎನ್. ಸಾವಿರಕುರಿ, ಪರಸಪ್ಪ ಬಂತಿ, ಎಂ.ಎ. ಮಕಾಂದಾರ, ಉಮೇಶ ಹುಚ್ಚಯ್ಯನಮಠ, ಕಾಶಪ್ಪ ಸ್ವಾಮಿ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಜಾಥಾದಲ್ಲಿ ಇದ್ದರು.