ಗಾಳಿಪಟ, ಸರ್ಫಿಂಗ್‌, ಮರಳು ಕಲಾಕೃತಿ ಮೂಲಕ ಮತದಾನ ಜಾಗೃತಿ

| Published : Apr 24 2024, 02:16 AM IST

ಗಾಳಿಪಟ, ಸರ್ಫಿಂಗ್‌, ಮರಳು ಕಲಾಕೃತಿ ಮೂಲಕ ಮತದಾನ ಜಾಗೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯ ಮಹತ್ವ ಸಾರುವ ಬೀದಿನಾಟಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ, ಸ್ವೀಪ್ ಅಧಿಕಾರಿಗಳು, ವಿವಿಧ ಸರ್ಫರ್‌ಗಳು ಇದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ ಪ್ರಯುಕ್ತ ಮತದಾನ ಜಾಗೃತಿಗಾಗಿ ನಗರದ ತಣ್ಣೀರುಬಾವಿ ಬ್ಲೂಫ್ಲ್ಯಾಗ್‌ ಬೀಚ್‌ನಲ್ಲಿ ಗಾಳಿಪಟ ಉತ್ಸವ, ಸರ್ಫಿಂಗ್, ಬೀದಿ ನಾಟಕ ಹಾಗೂ ಮರಳಿನಲ್ಲಿ ಕಲಾಕೃತಿ ರಚಿಸಿ ಮತದಾರರ ಗಮನ ಸೆಳೆಯಲಾಯಿತು.

ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಡಾ. ಆನಂದ ಕೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೀಚ್‌ನಲ್ಲಿ ಹಾಜರಿದ್ದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಬಣ್ಣ ಬಣ್ಣದ ಗಾಳಿಪಟಗಳು ಗಾಳಿಯಲ್ಲಿ ಹಾರಾಡಿ ಮತದಾನ ಜಾಗೃತಿ ಮೂಡಿಸಿದವು.

ಜಿ‌.ಪಂ. ಸಿಇಒ ಖುದ್ದು ಗಾಳಿಪಟ ಹಾರಿಸುವ ಮೂಲಕ ಮತದಾನ ಮಾಡುವ ಸಂದೇಶ ಸಾರಿದರು. ಗಾಳಿಪಟ ಪ್ರೇಮಿಗಳು ಆಗಸದಲ್ಲಿ ಹಾರಾಡುತ್ತಿದ್ದ ಗಾಳಿಪಟಗಳನ್ನು ಕಣ್ತುಂಬಿಸಿಕೊಂಡರು.

ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ನಗರ ವಾಸಿಗಳು ಹೆಚ್ಚು ಮತದಾನ‌ ಮಾಡುವ ಮೂಲಕ ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಿಸುಂತೆ ಸಿಇಒ ಕರೆ ನೀಡಿದರು.

ಜಿಲ್ಲಾ ಐಕಾನ್ ಅಶ್ವಿನ್ ನಾಯ್ಕ್ ಮಾತನಾಡಿ, ಎಲ್ಲರೂ ಮುಕ್ತವಾಗಿ ಮತದಾನ ಮಾಡಬೇಕು. ಅದನ್ನು ಹಬ್ಬದ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಆಸಕ್ತಿಯಿಂದ ಭಾಗವಹಿಸಬೇಕು. ಪ್ರಜ್ಞಾವಂತ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಈ‌ ಬಾರಿ‌ ಮತದಾನ ಮಾಡಬೇಕು ಎಂದರು.

ಈ ವೇಳೆ ಚುನಾವಣೆಯ ಮಹತ್ವ ಸಾರುವ ಬೀದಿನಾಟಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ, ಸ್ವೀಪ್ ಅಧಿಕಾರಿಗಳು, ವಿವಿಧ ಸರ್ಫರ್‌ಗಳು ಇದ್ದರು.