ಕಸಾಪದಿಂದ ಮತ ಕಾವ್ಯದ ಮೂಲಕ ಮತದಾನ ಜಾಗೃತಿ

| Published : May 05 2024, 02:04 AM IST

ಸಾರಾಂಶ

ಮತ ಚಲಾಯಿಸಿ ಮತಿಯಿಂದ, ಜಾತಿ ಮತಗಳ ಬದಿಗಿರಿಸಿ, ಭಯ ಬಿಡಿ ಮತದಾನ ಮಾಡಿ, ಚುನಾವಣೆ ಪ್ರಜಾಪ್ರಭುತ್ವದ ಉಯ್ಯಾಲೆ, ಮತದಾನದಲ್ಲಿ ಭಾಗವಹಿಸಿ ದೇಶದ ಹಿತ ಕಾಪಾಡಿ.

ಹೂವಿನಹಡಗಲಿ: ಮತದಾನ ಮಾಡಿ ಭಾರ ಇಳಿಸುವವನಿಗೆ, ಕಣ್ಣೀರು ಒರೆಸುವವನಿಗೆ, ನಿಮ್ಮ ಬೆರಳಿನ ನೀಲಿ ಶಾಹಿಯಿಂದ ಬೆಳಕಿನ ರಾಜಕುಮಾರ ಮೂಡಿಬರಲಿ ಎಂದು ಹೂವಿನಹಡಗಲಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ವತಿಯಿಂದ ಮತದಾರರ ಜಾಗೃತಿಯ ಅಭಿಯಾನ ಅಂಗವಾಗಿ ಪಟ್ಟಣದ ಸೊಪ್ಪಿನ ಕಾಳಮ್ಮ ಬಡಾವಣೆಯ ಶ್ರೀಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆಯೋಜಿಸಿದ ಮತದಾನ ಜಾಗೃತಿಯ ವಿಶೇಷ ಕಾರ್ಯಕ್ರಮ ಮತಕಾವ್ಯ ಕವಿಗೋಷ್ಠಿಯಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮತ ಚಲಾಯಿಸಿ ಮತಿಯಿಂದ, ಜಾತಿ ಮತಗಳ ಬದಿಗಿರಿಸಿ, ಭಯ ಬಿಡಿ ಮತದಾನ ಮಾಡಿ, ಚುನಾವಣೆ ಪ್ರಜಾಪ್ರಭುತ್ವದ ಉಯ್ಯಾಲೆ, ಮತದಾನದಲ್ಲಿ ಭಾಗವಹಿಸಿ ದೇಶದ ಹಿತ ಕಾಪಾಡಿ, ಮತದಾನವು- ಹಬ್ಬ, ಫಲಿತಾಂಶವು-ಸುಗ್ಗಿ, ಮತದಾನದಲ್ಲಿ ಭಾಗವಹಿಸದಿದ್ದರೆ ನೀವು ಇದ್ದೂ ಇಲ್ಲದಂತೆ, ಚುನಾವಣೆ 5 ವರ್ಷಕ್ಕೊಮ್ಮೆ ಬರುವ ದೇಶದ ಹಬ್ಬ. ಈ ಹಬ್ಬ ಆಚರಣೆಗೆ ದುರ್ಬಲರಿಗೆ, ವಿಕಲಚೇತನರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ ಆಯೋಗ, ಮತದಾನ ಅಗತ್ಯ, ಜಗದ ಕತ್ತಲು ಅಳಿಸಲು, ಸುಭದ್ರ ದೇಶದ ನಿರ್ಮಾಣ ಮಾಡಲು, ಒಂದು ದಿನದ ಆಸೆ ಆಮಿಷ ಬದಿಗಿರಿಸಿ ನಿಷ್ಪಕ್ಷಪಾತವಾಗಿ ಮತ ಚಲಾಯಿಸಿ, ಮಾಡಬೇಕು ಮತದಾನ ಕಲ್ಯಾಣ ರಾಜ್ಯ ನಿರ್ಮಾಣವಾಗಲು, ಮತ ಚಲಾಯಿಸಿ ಪ್ರಜಾಪ್ರಭುತ್ವದ ತೇರನೆಳೆಯೋಣ, ಮತಗಳು ಅಭಿವೃದ್ಧಿಯ ಪಥಗಳು ಹೀಗೆ ಮತದಾನ ಜಾಗೃತಿ ಕುರಿತು ಹಿರಿ ಕಿರಿ ಕವಿಗಳನ್ನು ತಮ್ಮದೇ ಆದ ದಾಟಿಯಲ್ಲಿ ಮತ ಕಾವ್ಯಗಳನ್ನು ವಾಚಿಸಿ ಎಲ್ಲರ ಗಮನ ಸೆಳೆದರು.

ಕವಿಗಳಾದ ರಾಮಪ್ಪ ಕೋಟಿಹಾಳ, ಟಿ.ಎಂ.ನಾಗಭೂಷಣ, ಗಡ್ಡಿ ಗೀತಪ್ರಿಯ, ಸಹದೇವಪ್ಪ ನಿಗದಿ, ನಾಗರಾಜ ಮಲ್ಕಿಒಡೆಯರ್, ಪ್ರವೀಣ ದೈವಜ್ಞಾಚಾರ್ಯ, ನಾಗಮಂಜುಳಾ ಜೈನ್, ಖಾದರ್ ಬಾಷಾ, ಶೋಭಾ ಮಲ್ಕಿಒಡೆಯರ್, ಎಂ.ಪಿ.ಎಂ.ಕೊಟ್ರಯ್ಯ, ಸಿ.ಎನ್.ಸೋಮೇಶಪ್ಪ ಪರಿಣಾಮಕಾರಿಯಾಗಿ ಕವನ ವಾಚಿಸಿ ಸಭಿಕರಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಿದರು.

ಹಿರಿಯ ಸಾಹಿತಿ ಪಿ.ಕರಿವೀರನಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲರೂ ತಪ್ಪದೇ ಮತದಾನ ಮಾಡಿ ಪ್ರಜಾತಂತ್ರದ ಹಬ್ಬವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ತಾಲೂಕು ಸ್ವೀಪ್ ಸಮಿತಿಯ ಸಂಚಾಲಕ, ತಾಪಂ ಸಹಾಯಕ ನಿರ್ದೇಶಕ ಹೇಮಾದ್ರಿನಾಯ್ಕ ಮಾತನಾಡಿ, ಇಂತಹದೊಂದು ವಿಶಿಷ್ಟ ಕಾರ್ಯಕ್ರಮ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಆಲೋಚಿಸಿ ಅನುಷ್ಠಾನ ಮಾಡಿದ್ದು ಸ್ತುತ್ಯಾರ್ಹ. ಜಿಲ್ಲೆಯಲ್ಲಿಯೇ ಇಂತಹದೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ ಉಂಟು ಮಾಡುತ್ತಿರುವುದು ಅಭಿನಂದನೀಯವೆಂದರು.

ಪುರಸಭೆಯ ವ್ಯವಸ್ಥಾಪಕ ಉಮೇಶ್ ಹಿರೇಮಠ ಮಾತನಾಡಿ, ಪ್ರತಿಯೊಂದು ಮತವು ಅಮೂಲ್ಯ, ಸರ್ವರೂ ಜನತಂತ್ರ ಗಟ್ಟಿಗೊಳಿಸುವ ಮತದಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಅಶೋಕ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು.

ಸಂಗೀತ ಶಿಕ್ಷಕ ಬಿ.ಯುವರಾಜಗೌಡ ಪ್ರಾರ್ಥಿಸಿದರು. ವಿ.ಭೀಮಾನಾಯ್ಕ ಸ್ವಾಗತಿಸಿದರು. ಜಿಲ್ಲಾ ಚುನಾವಣಾ ತರಬೇತುದಾರ ಎ.ಕೊಟ್ರಗೌಡ ಪ್ರಾಸ್ತಾವಿಕ ಮಾತನಾಡಿದರು. ಯುವರಾಜಗೌಡ ಹಾಗೂ ಎ.ಚಂದ್ರಪ್ಪ ಇವರು ಮತದಾನ ಜಾಗೃತಿ ಗೀತೆಗಳ ಗಾಯನ ಜನಮನ ಸೂರೆಗೊಂಡಿತು.

ಕಸಾಪ ಮಾಜಿ ಅಧ್ಯಕ್ಷ ಎಚ್‌.ಜಿ.ಪಾಟೀಲ್ ವಂದಿಸಿದರು. ಗೌರವ ಕಾರ್ಯದರ್ಶಿ ಎ.ಎಂ.ಚನ್ನವೀರಸ್ವಾಮಿ, ಶಿಕ್ಷಕ ಗಡ್ಡಿ ಶಿವಕುಮಾರ ನಿರ್ವಹಿಸಿದರು.