ಸಾರಾಂಶ
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಯುತ್ತಿರುವುದರಿಂದ ಇಂಡಿಗನತ್ತ ಗ್ರಾಮಸ್ಧರ ಮೇಲಿನ ಮತದಾನ ಬಹಿಷ್ಕಾರ ಘರ್ಷಣೆ ಪ್ರಕರಣಗಳನ್ನು ರದ್ದುಗೊಳಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ತಾಲೂಕಿನ ಜಲತ್ವ ಸಮಸ್ಯೆಗಳಿಗೆ ಪ್ಯಾಕೇಜ್ ಘೋಷಣೆ ಮಾಡಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೆಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಸಂದರ್ಭದಲ್ಲಿ ಇಂಡಿಗನತ್ತ ಗ್ರಾಮದ ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗಿವೆ. ಈ ಗಂಭೀರ ಪ್ರಕರಣವನ್ನು ವಜಾಗೊಳಿಸುವ ಮೂಲಕ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನದಲ್ಲಿ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.ಭಕ್ತಾದಿಗಳಿಗೆ ಮೂಲಸೌಲಭ್ಯ ಕಲ್ಪಿಸಿ:
ಮಲೆಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿ ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕು. ತಾಲೂಕಿನ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಹೆಚ್ಚಿನ ವೈದ್ಯರನ್ನು ನೇಮಕ ಮಾಡಬೇಕು. ಜೊತೆಗೆ ರಾಜ್ಯ ಸಾರಿಗೆ ಘಟಕವನ್ನು ಹನೂರಿನಲ್ಲಿ ತೆರೆಯಬೇಕು. ಜೊತೆಗೆ ತಾಲೂಕು ಕೇಂದ್ರದಲ್ಲಿ ಕೋರ್ಟ್ ಕಚೇರಿ ನಿರ್ಮಾಣ ಮಾಡಬೇಕು. ಹನೂರು ತಾಲೂಕು ಕೇಂದ್ರ ಘೋಷಣೆಯಾಗಿ ಹಲವಾರು ವರ್ಷಗಳು ಕಳೆದಿದ್ದು ತಾಲೂಕು ಕೇಂದ್ರದಲ್ಲಿ ಬೇಕಾದ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಉಳಿದುಕೊಳ್ಳಲು ಅಧಿಕಾರಿಗಳಿಗೆ ವಾಸದ ವ್ಯವಸ್ಥೆ ಇಲ್ಲ. ಈ ನಿಟ್ಟನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಹನೂರು ತಾಲೂಕಿನ ರಾಮಪುರ ಹೋಬಳಿಗೆ ಸೇರಿದ ಕಿರಪತಿ ಸರ್ವೆ ನಂ.18ರಲ್ಲಿ 1700 ಎಕರೆ ಹೂಗ್ಯಂ ಸರ್ವೆ ನಂ.239ರಲ್ಲಿ 2700 ಎಕರೆ ಜಮೀನು ಒಂದೇ ಸರ್ವೆ ನಂಬರಲ್ಲಿ ಇರುವುದರಿಂದ ರೈತರಿಗೆ ಸರ್ಕಾರಿ ಸೌಲತ್ತು ಪಡೆಯಲು ಸಮಸ್ಯೆ ಉಂಟಾಗಿದ್ದು, ಪ್ರತ್ಯೇಕ ಪೋಡಿ ಮಾಡಿ ಅನುಕೂಲ ಕಲ್ಪಿಸಲು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೂಗ್ಯಂ ಗಡಿ ಗ್ರಾಮದಲ್ಲಿ ಪವರ್ ಸ್ಟೇಷನ್ ನಿರ್ಮಾಣ ಮಾಡಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಮಸ್ಯೆ ಆಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್, ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಸವರಾಜ್,ರೈತ ಮುಖಂಡರಾದ ಕೂಡ್ಲೂರು ವೆಂಕಟೇಶ್ ಶಿವಣ್ಣ, ನಾಗರಾಜ್, ಮುತ್ತಣ್ಣ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.