ಆಮಿಷದ ಮತ ಚಲಾವಣೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ

| Published : Jan 26 2025, 01:30 AM IST

ಆಮಿಷದ ಮತ ಚಲಾವಣೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

Voting by proxy is dangerous for democracy

-ಚಿತ್ರದುರ್ಗದಲ್ಲಿ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್ ಅಭಿಮತ । ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

-----

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಆಮಿಷಕ್ಕೆ ಒಳಗಾಗಿ ಮತ ಚಲಾಯಿಸುವ ಮತ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ಹೇಳಿದರು.

ನಗರದ ತರಾಸು ರಂಗಮಂದಿರಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವರು ದೇಶದ ಅಭಿವೃದ್ಧಿಗೆ ಉತ್ತಮ ನಾಯಕರು ಅಗತ್ಯ. ಅಂತಹ ನಾಯಕರ ಆಯ್ಕೆ ಮಾಡಲು ಯಾವುದೇ ಆಮಿಷಗಳಿಗೆ ಒಳಗಾಗದೇ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂದರು.

ಯುವಕರು ಹಾಗೂ ವಿದ್ಯಾರ್ಥಿಗಳು ಮನೆಗಳಲ್ಲಿ ಮತದಾನದ ಮಹತ್ವ ತಿಳಿಸಿ ಪ್ರತಿಯೊಬ್ಬರು ಮತದಾನ ಚಲಾಯಿಸುವಂತೆ ಪ್ರೇರೇಪಿಸಬೇಕು. 18 ವರ್ಷ ತುಂಬಿದ ಯುವಕರು ಆನ್‍ಲೈನ್ ಮೂಲಕವೇ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಹಾಕಬಹುದು. ಮುದ್ರಿತ ಗುರುತಿನ ಚೀಟಿ ನಿಮ್ಮ ಮನೆಬಾಗಿಲಿಗೆ ಬರುತ್ತದೆ. ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

18ವರ್ಷ ತುಂಬಿದ ಎಲ್ಲ ನಾಗರಿಕರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪ್ರಾಪ್ತವಾಗುತ್ತದೆ. ಚುನಾವಣೆ ಆಯೋಗ ಎಲ್ಲ ಅರ್ಹ ಮತದಾರ ಪಟ್ಟಿಯನ್ನು ತಯಾರಿಸುವ ಹಾಗೂ ಕಾಲಕಾಲಕ್ಕೆ ಪರಿಷ್ಕರಿಸುವ ಕಾರ್ಯನಿರ್ವಹಿಸುತ್ತದೆ. ಮರಣ ಹೊಂದಿದವರು, ದೇಶದ ಪೌರತ್ವ ತ್ಯಜಿಸಿ, ವಿದೇಶಗಳಿಗೆ ಹೋದವರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಚುನಾವಣೆ ಆಯೋಗ ತೆಗೆದು ಹಾಕುತ್ತದೆ. 18ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು ಅತ್ಯಂತ ದೊಡ್ಡ ಕೆಲಸ. ಇವರಿಗೆ ಹೊಸದಾಗಿ ಗುರುತಿನ ಚೀಟಿ ನೀಡಲಾಗುತ್ತದೆ. ಇದರಿಂದ ಯುವಕರಿಗೆ ಮತದಾನ ಹಕ್ಕು ಲಭ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಚುನಾವಣೆಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಇದುವರೆಗೂ ಶೇ.100ರಷ್ಟು ಮತದಾನ ಚಲಾವಣೆಯಾದದ್ದನ್ನು ಕಂಡಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿ ಮತದಾನ ಜಾಗೃತಿ ಕಡಿಮೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, 1950 ಜನವರಿ 25ರಂದು ಭಾರತ ಚುನಾವಣಾ ಆಯೋಗ ಸ್ಥಾಪಿಸಲಾಯಿತು. ಈ ನೆನಪಿಗಾಗಿ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವ ಸಧೃಢವಾಗಿರಲು ಪ್ರತಿಯೊಬ್ಬರು ಮತದಾನ ಮಾಡುವುದು ಅವಶ್ಯಕ. ಜ.1ಕ್ಕೆ 18ವರ್ಷ ಪೂರೈಸಿದವರೆಲ್ಲರೂ ಮತದಾರ ಪಟ್ಟಿಗೆ ಸೇರ್ಪಡೆಗೆ ಅರ್ಹತೆ ಪಡೆಯುತ್ತಾರೆ. ಕಡ್ಡಾಯವಾಗಿ ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಅವರು ಮತದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹೊಸ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಯಿತು.

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ನಗರದ ಒನಕೆ ಓಬವ್ವ ವೃತ್ತದಲ್ಲಿ ಮತದಾರ ಜಾಗೃತಿ ಜಾಥಾಕ್ಕೆ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಒನಕೆ ಓಬವ್ವ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾವು ಅಂಬೇಡ್ಕರ್ ವೃತ್ತದ ಮೂಲಕ ನಗರದ ತರಾಸು ರಂಗಮಂದಿರದ ವರೆಗೂ ನಡೆಯಿತು. ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಚುನಾವಣಾ ತಹಶೀಲ್ದಾರ್ ಮಲ್ಲಿಕಾರ್ಜುನ್ ನಾಯಕ ಇದ್ದರು.

-----------

...ಬಾಕ್ಸ್...

ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ

ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಹಾನಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮತಗಟ್ಟೆ ಅಧಿಕಾರಿ ಎ.ಎಸ್.ಜಾನಕಿರಾಮ್, ಚಳ್ಳಕೆರೆ ಕ್ಷೇತ್ರದ ಜನ್ನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಆರ್.ಹನುಮಂತಪ್ಪ, ಚಿತ್ರದುರ್ಗದ ಐನಹಳ್ಳಿ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಎಸ್.ಲೀಲಾ ಹಾಗೂ ನೆಹರು ನಗರದ ಮಿಲ್ಲತ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತಗಟ್ಟೆ ಅಧಿಕಾರಿ ಕತುನ್ ಬಿ, ಹಿರಿಯೂರು ಅಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಎಸ್.ಸುರೇಶ್ ಕುಮಾರ್, ಹೊಸದುರ್ಗ ಜನರಲ್ ಕಾರಿಯಪ್ಪ ಸ್ಮಾರಕ ಶಾಲೆಯ ಮತಗಟ್ಟೆ ಅಧಿಕಾರಿ ಅಶ್ವತ್ಥಾಮ, ಹೊಳಲ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಅಧಿಕಾರಿ ಕೆ.ವಿವೇಕಾನಂದ ಅವರನ್ನು ಸನ್ಮಾನಿಸಲಾಯಿತು.

------

ಪೋಟೋ:ನಗರದ ತರಾಸು ರಂಗಮಂದಿರಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾ. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ ವಾಸುದೇವ್ ಉದ್ಘಾಟಿಸಿದರು.

--------------

ಪೋಟೋ: 25ಸಿಟಿಡಿ1