ಮನವೊಲಿಸಿದ ಅಧಿಕಾರಿಗಳು: ಹೊನ್ನೂರು ವಡ್ಡರಹಟ್ಟಿ ತಾಂಡಾ ಜನರಿಂದ ಮತದಾನ

| Published : May 08 2024, 01:08 AM IST

ಮನವೊಲಿಸಿದ ಅಧಿಕಾರಿಗಳು: ಹೊನ್ನೂರು ವಡ್ಡರಹಟ್ಟಿ ತಾಂಡಾ ಜನರಿಂದ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ತಾಂಡಕ್ಕೆ ಪ್ರತ್ಯೇಕ ಮತಗಟ್ಟೆ ಬೇಕು, ಇಲ್ಲವಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದ ತಾಲೂಕಿನ ಹೊನ್ನೂರು ವಡ್ಡರಹಟ್ಟಿ ತಾಂಡಾದ ಜನರು ಅಧಿಕಾರಿಗಳು ಮನವೊಲಿಸಿದ ಪರಿಣಾಮ ಮತದಾನ ಮಾಡಿ, ಮಾದರಿಯಾದರು.

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ತಮ್ಮ ತಾಂಡಕ್ಕೆ ಪ್ರತ್ಯೇಕ ಮತಗಟ್ಟೆ ಬೇಕು, ಇಲ್ಲವಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದ ತಾಲೂಕಿನ ಹೊನ್ನೂರು ವಡ್ಡರಹಟ್ಟಿ ತಾಂಡಾದ ಜನರು ಅಧಿಕಾರಿಗಳು ಮನವೊಲಿಸಿದ ಪರಿಣಾಮ ಮತದಾನ ಮಾಡಿ, ಮಾದರಿಯಾದರು.

ಮತದಾನದ ದಿನವಾದ ಮೇ 7ರಂದು ಉಪ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ ಅವರು ಹೊನ್ನಾಳಿ, ನ್ಯಾಮತಿ ತಾಲೂಕು ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ತಾಂಡಾಕ್ಕೆ ತೆರಳಿದರು. ಸ್ಥಳೀಯರ ಮನವೊಲಿಸಿ, ತಾನೂ ಈ ಬಾರಿ ನಿಮ್ಮೊಂದಿಗೆ ಕಾಲ್ನಡಿಗೆಯಲ್ಲಿಯೇ ಹೊನ್ನೂರುವಡ್ಡರ ಹಟ್ಟಿ ಗ್ರಾಮಕ್ಕೆ ಬರುತ್ತೇನೆ, ದಯವಿಟ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ಅಧಿಕಾರಿಗಳ ಕೋರಿಕೆಗೆ ಮಣಿದ ತಾಂಡಾ ಜನರು ಬಹಿಷ್ಕಾರ ಹಿಂಪಡೆದು, ಹೊನ್ನೂರು ವಡ್ಡರ ಹಟ್ಟಿ ಗ್ರಾಮಕ್ಕೆ ಬಂದು ಮತಗಟ್ಟೆ ಸಂಖ್ಯೆ 7ರಲ್ಲಿ ಮತಹಾಕಿದರು.

ಈ ಸಂದರ್ಭ ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಸೀಲ್ದಾರ್, ಫಿರೋಜ್ ಷಾ, ತಾಪಂ ಅಧಿಕಾರಿ, ಸುಮಾ, ರಾಘವೇಂದ್ರ, ಸೆಕ್ಟರ್ ಆಧಿಕಾರಿಗಳು ತಾಂಡಾದ ಮುಖಂಡರು, ಪಿಡಿಒ ಅರುಣ್ ಇತರರು ಇದ್ದರು.

ಮತದಾನ ಬಹಿಷ್ಕರಿಸಿದ್ದು ಏಕೆ?:

ಪ್ರತ್ಯೇಕ ಮತಗಟ್ಟೆ ಬೇಡಿಕೆಯಿಟ್ಟು ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಸುದ್ದಿ ತಿಳಿದು ಉಪಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರು ತಹಸೀಲ್ದಾರ್, ತಾಲೂಕು ಪಂಚಾಯಿತಿ ಅಧಿಕಾರಿ ಸುಮಾ ಸೇರಿದಂತೆ ಅಧಿಕಾರಿಗಳ ತಂಡದೊಂದಿಗೆ ಹೊನ್ನೂರು ವಡ್ಡರಹಟ್ಟಿ ತಾಂಡಾಕ್ಕೆ ಭೇಟಿ ನೀಡಿದ್ದರು. ಪ್ರತಿಭಟನಾನಿರತ ಜನರೊಂದಿಗೆ ಕೂಲಂಕಷವಾಗಿ ಮಾತನಾಡಿದ್ದರು. ಈ ವೇಳೆ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟಿದ್ದರು.

ಉಪವಿಭಾಗಾಧಿಕಾರಿ ಭೇಟಿ ಸಮಯದಲ್ಲಿ ಸ್ಥಳದಲ್ಲಿದ್ದ ಯುವಕರು, ತಾಂಡಾ ಜನ ಮಾತನಾಡಿ, ತಾಂಡಾದಲ್ಲಿ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇವೆ, ಶಿಕ್ಷಣ ಸೌಲಭ್ಯ, ಸಾರಿಗೆ ಸೌಲಭ್ಯ ಹೀಗೆ ಹಲವಾರು ಸಮಸ್ಯೆಗಳಿವೆ. ಮತಗಟ್ಟೆ ತಮ್ಮ ತಾಂಡಾದಿಂದ ಕಿ.ಮಿ.ಗಟ್ಟಲೇ ದೂರವಿರುವ ಹೊನ್ನೂರು ವಡ್ಡರಹಟ್ಟಿ ಗ್ರಾಮದಲ್ಲಿದೆ. ಮತ ಹಾಕಲು ತೆರಳಲು ತಾಂಡಾ ಮಹಿಳೆಯರು, ವೃದ್ಧರು, ರೋಗಪೀಡಿತರು, ವಿಕಲಚೇತನರಿಗೆ ತುಂಬಾ ತೊಂದರೆಯಾಗುತ್ತಿದೆ. ಹಲವಾರು ವರ್ಷಗಳಿಂದ ತಾಂಡಾಕ್ಕೆ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಿ ಕೊಡಿ ಎಂದು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಜಿ ಕೊಟ್ಟು, ಮನವಿ ಸಲ್ಲಿಸುತ್ತಿದ್ದೇವೆ. ಆದರೂ, ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಕಾರಣದಿಂದ ತಾಂಡಾ ಜನ 2024ರ ಲೋಕಸಭಾ ಚುನಾವಣೆಗೆ ಮತ ಬಹಿಷ್ಕಾರ ಮಾಡುತ್ತಿರುವುದಾಗಿ ತಿಳಿಸಿದ್ದರು.

ತಾಂಡಾ ನಿವಾಸಿಗಳ ಅಹವಾಲಿಗೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಅವರು, ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭ ಹೊಸದಾಗಿ ಮತಗಟ್ಟೆ ಮಂಜೂರಾತಿ ಆಗೋದಿಲ್ಲ. ಆದಾಗ್ಯೂ ತಾನು ಇಲಾಖೆ ವತಿಯಿಂದ ಪ್ರತ್ಯೇಕ ಮತಗಟ್ಟೆ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಮೂಲಕ ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದ್ದರು. ಈ ಬಾರಿ ಅಲ್ಲದಿದ್ದರೂ ಮುಂದಿನ ಬಾರಿಗೆ ನಿಮಗೆ ಪ್ರತ್ಯೇಕ ಮತಗಟ್ಟೆ ಮಂಜೂರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಆದರೂ ತಾಂಡಾ ಜನ ತಮ್ಮ ಪಟ್ಟು ಬಿಟ್ಟಿರಲಿಲ್ಲ. ಆದರೂ, ಕಡೇ ಗಳಿಗೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಸಾಥ್‌ ನೀಡಿ, ಮತದಾನ ಮಾಡಿರುವುದು ಮಾದರಿ ನಡೆಯಾಗಿದೆ.

- - -

-7ಎಚ್.ಎಲ್.ಐ3ಃ:

ಪ್ರತ್ಯೇಕ ಮತಗಟ್ಟೆಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದ ತಾಂಡಾ ನಿವಾಸಿಗಳು ಅಧಿಕಾರಿಗಳ ಮನವಿಗೆ ಮಣಿದು ಮಂಗಳವಾರ ಉಪವಿಗಾಧಿಕಾರಿ ನೇತೃತ್ವದಲ್ಲಿ ಕಾಲ್ನಡಿಗೆಯೆಲ್ಲಿ ಹೊನ್ನೂರು ವಡ್ಡರ ಹಟ್ಟಿ ಗ್ರಾಮದ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.