ಇನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಶಾಸಕರಿರುವುದರಿಂದ ಎಲ್ಲಕ್ಕೂ ಮಿಗಿಲಾಗಿ ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಈ ಬಾರಿಯೂ ಅತ್ಯಧಿಕ ಲೀಡ್ ಅನ್ನು ಜಿಲ್ಲೆಯ ಮತದಾರರು ನೀಡುತ್ತಾರೆಂಬುದು ಮೈತ್ರಿ ಪಕ್ಷದವರ ಆಂಬೋಣ.
ಕನ್ನಡಪ್ರಭ ವಾರ್ತೆ, ತುಮಕೂರು
ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಿಂದ ಒಟ್ಟು 50060 ಮತದಾರರಿದ್ದಾರೆ. ಡಿಸೆಂಬರ್ 30, 2025 ರ ಅಂತ್ಯಕ್ಕೆ 48,291 ಮತದಾರರಿದ್ದರು. ನಿರಂತರ ಪರಿಷ್ಕರಣೆ ಅಡಿಯಲ್ಲಿ 1869 ಮತದಾರರು ಹೊಸದಾಗಿ ಸೇರ್ಪಡೆಯಾಗಿರುವುದರಿಂದ 50060 ಮತದಾರರು ಹಕ್ಕು ಚಲಾಯಿಸಲಿದ್ದಾರೆ.ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ತುಮಕೂರು ಜಿಲ್ಲೆಯವರು. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಬಿಜೆಪಿ ಮತ್ತು ಜೆಡಿಎಸ್ ತಲಾ 2 ಕ್ಷೇತ್ರದಲ್ಲಿ ಶಾಸಕರಿದ್ದಾರೆ. ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ ಕ್ಷೇತ್ರದಿಂದ ಒಟ್ಟು 1,84,000 ಮತದಾರರಿದ್ದರೆ ಜಿಲ್ಲೆಯಲ್ಲೇ 50 ಸಾವಿರ ಕ್ಕೂ ಹೆಚ್ಚು ಮತದಾರರಿರುವುದು ವಿಶೇಷ.
ಕಳೆದ ಬಾರಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಿ.ಟಿ. ಶ್ರೀನಿವಾಸ್ ಜಯ ಸಾಧಿಸಿದ್ದರು. ಹಾಗೆಯೇ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜಯಗಳಿಸುತ್ತದೆ ಎಂಬುದು ಶಶಿ ಹುಲಿಕುಂಟೆ ಮಠ ಅವರ ಅಭಿಪ್ರಾಯ. ಆದರೆ ಆಗ್ನೇಯ ಪದವೀಧರ ಕ್ಷೇತ್ರ ತುಮಕೂರು ಜಿಲ್ಲೆಯಲ್ಲಿ ಯಾವತ್ತೂ ಬಿಜೆಪಿಗೆ ಭದ್ರ ಕೋಟೆ. ಈ ಬಾರಿ ಎರಡೂ ಪಕ್ಷಗಳು ಒಟ್ಟಾಗಿ ಎನ್ಡಿಎ ಅಭ್ಯರ್ಥಿಯಾಗಿರುವ ಕೆ.ಎಂ. ಸುರೇಶ ಅವರಿಗೆ ಬಲ ಬಂದಂತಾಗಿದೆ. ಕಣದಲ್ಲಿ 10 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್ ಮತ್ತು ಎನ್ಡಿಎ ಅಭ್ಯರ್ಥಿ ನಡುವೆ ನೇರ ಹಣಾ ಹಣೆ ಇದೆ.ತುಮಕೂರು ನಗರ, ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕಾರ್ಯ ತುಮಕೂರು ತಾಲೂಕು ಕಚೇರಿಯಲ್ಲಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕಾರ್ಯ ತುಮಕೂರು ಉಪವಿಭಾಗಾಧಿಕಾರಿ ನ್ಯಾಯಾಲಯ ಸಭಾಂಗಣ, ಮಧುಗಿರಿ, ಶಿರಾ, ಕೊರಟಗೆರೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕಾರ್ಯ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದರೂ ಕೂಡ ಈ ಬಾರಿ ಅದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಇರಾದೆ ಕಾಂಗ್ರೆಸ್ ಪಕ್ಷಕ್ಕಿದೆ. ಅಲ್ಲದೇ ಕೆಲ ತಿಂಗಳುಗಳ ಹಿಂದೆಯೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿತ್ತು. ಹಾಗಾಗಿ ಸಾಕಷ್ಟು ಪ್ರಚಾರ ಕೂಡ ಮಾಡಿದೆ. ಅಲ್ಲದೇ 7 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವುದರಿಂದ ಹೆಚ್ಚು ಮತ ಬರಬಹುದೆಂಬ ಅಂದಾಜು ಕಾಂಗ್ರೆಸ್ ಪಕ್ಷದ ಪಾಳೆಯಲ್ಲಿದೆ.ಇನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಶಾಸಕರಿರುವುದರಿಂದ ಎಲ್ಲಕ್ಕೂ ಮಿಗಿಲಾಗಿ ಆಗ್ನೇಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಈ ಬಾರಿಯೂ ಅತ್ಯಧಿಕ ಲೀಡ್ ಅನ್ನು ಜಿಲ್ಲೆಯ ಮತದಾರರು ನೀಡುತ್ತಾರೆಂಬುದು ಮೈತ್ರಿ ಪಕ್ಷದವರ ಆಂಬೋಣ.
ಈಗಾಗಲೇ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ತಮಗೆ ಗುರುತಿಸಿರುವ ಮತಗಟ್ಟೆಗಳಿಗೆ ಬೆಳಗ್ಗೆಯಿಂದಲೇ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲೆಯ 80 ಮತಗಟ್ಟೆಗಳಲ್ಲೂ ಕೂಡ ಬಿಗಿ ಬಂದೋಬಸ್ತ್ ಹಾಕಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಜ್ಜಾಗಿದೆ.