ಮತದಾನ ಸಂವಿಧಾನಾತ್ಮಕ ಹಕ್ಕು; ತಪ್ಪದೇ ಪ್ರತಿಯೊಬ್ಬರು ಚಲಾಯಿಸಿ

| Published : Mar 28 2024, 12:48 AM IST

ಮತದಾನ ಸಂವಿಧಾನಾತ್ಮಕ ಹಕ್ಕು; ತಪ್ಪದೇ ಪ್ರತಿಯೊಬ್ಬರು ಚಲಾಯಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನವು ರಾಷ್ಟ್ರದ ನಾಗರಿಕರಿಗೆ ನೀಡಿರುವ ಅಮೂಲ್ಯವಾದ ಹಕ್ಕು ಮತದಾನ. ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯವಾಗಿದೆ.

ಧಾರವಾಡ:

ಸಂವಿಧಾನವು ರಾಷ್ಟ್ರದ ನಾಗರಿಕರಿಗೆ ನೀಡಿರುವ ಅಮೂಲ್ಯವಾದ ಹಕ್ಕು ಮತದಾನ. ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ವಯಸ್ಕ ಪ್ರಜೆಯ ಕರ್ತವ್ಯವಾಗಿದೆ. ಆದ್ದರಿಂದ ಅರ್ಹ ಪ್ರತಿಯೊಬ್ಬರು ಬರುವ ಮೇ 7ರಂದು ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ವಾಕಾಥಾನ್ ಹಾಗೂ ಕಲಾ ತಂಡಗಳ ಜಾಥಾ ಕಾರ್ಯಕ್ರಮಕ್ಕೆ ವಾದ್ಯ ಬಾರಿಸುವ ಮೂಲಕ ಚಾಲನೆ ನೀಡಿದ ಅವರು, ಮತದಾನ ಹೆಚ್ಚಿಸುವಲ್ಲಿ ಸ್ವೀಪ್ ಕಾರ್ಯ ಚಟುವಟಿಕೆಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ಮತದಾರನಿಗೆ ಮತದಾನದ ಮಹತ್ವ ತಿಳಿಸಿ, ಅರಿವು ಮೂಡಿಸಿ ತಪ್ಪದೇ ಮತದಾನ ಮಾಡುವಂತೆ ಮಾಡುವುದು ಮತ್ತು ಪ್ರತಿ ಅರ್ಹ ಮತದಾರನು ಮತದಾರ ಪಟ್ಟಿಯಲ್ಲಿ ತಪ್ಪದೇ ತನ್ನ ಹೆಸರು ಸೇರ್ಪಡೆ ಆಗಿರುವ ಬಗ್ಗೆ ಖಾತರಿ ಮಾಡಿಕೊಳ್ಳಲು ತಿಳಿಸುವದಾಗಿದೆ ಎಂದರು.

ಪಟ್ಟಿಯಲ್ಲಿ ಸೇರಲು ಅವಕಾಶ:

ಮತದಾರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ರದ್ದುಪಡಿಸುವುದು ಸೇರಿದಂತೆ ಎಲ್ಲ ಕಾರ್ಯಗಳು ವರ್ಷ ಪೂರ್ತಿ ನಿರಂತರವಾಗಿ ನಡೆಯುತ್ತಿರುತ್ತವೆ. ಮೇ 7ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶಕ್ಕಾಗಿ ಮತದಾರಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ನಮೂನೆ 6ನ್ನು ಸಲ್ಲಿಸಲು ಏ. 9ರ ವರೆಗೆ ಅವಕಾಶವಿದೆ ಎಂದ ಅವರು, ಅಗತ್ಯ ದಾಖಲೆಗಳೊಂದಿಗೆ ಅರ್ಹತೆ ಇದ್ದು ಮತದಾರ ಪಟ್ಟಿಗೆ ಹೆಸರು ಸೆರ್ಪಡೆ ಮಾಡಿಕೊಳ್ಳಬಹುದು ಎಂದರು.

ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ ಒಂಭತ್ತು ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಜಿಲ್ಲೆಯ ಶೇಕಡಾವಾರು ಮತದಾನ ಶೇ. 70ರಷ್ಟು ಆಗಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 90ಕ್ಕಿಂತಲೂ ಹೆಚ್ಚು ಆಗುವಂತೆ ಮಾಡಲು ಕಡಿಮೆ ಮತದಾನದ ಮತಗಟ್ಟೆ ಮತ್ತು ಅವುಗಳ ಸುತ್ತಲಿನ ಮತಗಟ್ಟೆ ಕೇಂದ್ರೀಕರಿಸಿ, ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಗರಪ್ರದೇಶದ ಮತದಾನ ಕಡಿಮೆ ಆಗಿದ್ದು, ಈ ಸಲ ನಗರ ಭಾಗದ ಎಲ್ಲ ಮನೆ-ಮನೆಗೆ ಮತದಾನದ ಮಹತ್ವ ಸಾರುವ ಸಂದೇಶ ತಲುಪುವಂತೆ ಸ್ವೀಪ್ ಸಮಿತಿ ಕಾರ್ಯ ಮಾಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳು ಆಗಿರುವ ಜಿಪಂ ಸಿಇಒ ಸ್ವರೂಪ ಟಿ.ಕೆ., ಮಾತನಾಡಿದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾದ ವಾಕಾಥಾನ್ ಮತ್ತು ಕಲಾ ತಂಡಗಳ ಜಾಥಾವು ಉಳವಿ ಚನ್ನಬಸವೇಶ್ವರ ವೃತ್ತ, ಕೋರ್ಟ್ ಸರ್ಕಲ್, ಆಲೂರು ವೆಂಕಟರಾವ್ ವೃತ್ತಕ್ಕೆ ಬಂದು ತಲುಪಿತು. ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಯೋಜನಾಧಿಕಾರಿ ದೀಪಕ ಮಡಿವಾಳರ, ಡಿಎಚ್‌ಒ ಡಾ. ಶಶಿ ಪಾಟೀಲ, ಡಾ.ಸುಜಾತಾ ಹಸವಿಮಠ ಮತ್ತಿತರರು ಇದ್ದರು. 27ಡಿಡಬ್ಲೂಡಿ4

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ವಾಕಾಥಾನ್ ಹಾಗೂ ಕಲಾ ತಂಡಗಳ ಜಾಥಾ ಕಾರ್ಯಕ್ರಮಕ್ಕೆ ವಾದ್ಯ ಬಾರಿಸುವ ಮೂಲಕ ಜಿಲ್ಲಾಧಿಕಾರಿ ಚಾಲನೆ ನೀಡಿದರು.