ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಚುನಾವಣೆ ಪ್ರಕ್ರಿಯೆನಾಗರಿಕ ಜೀವನ ಶೈಲಿಯ ಒಂದು ಭಾಗ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ ಮಾತ್ರ ಸಾರ್ವತ್ರಿಕ ಮತದಾನದ ಮಹತ್ವ ಅರಿಯಲು ಸಾಧ್ಯ ಎಂದು ತಾಲೂಕು ಚುನಾವಣೆ ಅಧಿಕಾರಿ, ತಹಸೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು.ಗೋಕಾಕ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಶಿಕ್ಷಣ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ’ರಾಷ್ಟ್ರೀಯ ಮತದಾರರ ದಿನ’ ಆಚರಣೆ ಹಿನ್ನೆಲೆಯಲ್ಲಿ ಕೆಎಲ್‌ಇ ಸಂಸ್ಥೆಯ ಸಿ.ಎಸ್.ಅಂಗಡಿ ಪ.ಪೂ. ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯುವ ಮತದಾರರಿಗೆ ಮತದಾನ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ ಆತ್ನೂರೆ ಮಾತನಾಡಿ, ಮತದಾರರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನಿಸ್ವಾರ್ಥ ಮನೋಭಾವದಿಂದ ಅಮೂಲ್ಯವಾದ ಮತ ಚಲಾಯಿಸಬೇಕೆಂದರು.ವಕೀಲರ ಸಂಘದ ಅಧ್ಯಕ್ಷ ಸುಭಾಷ್‌ಚಂದ್ರ ಬಿ.ಪಾಟೀಲ ಮಾತನಾಡಿ, ಮತದಾನ ಹಕ್ಕು ಹೊಂದಿರುವ ವಿದ್ಯಾರ್ಥಿಗಳು ತಮ್ಮೊಂದಿಗೆ ನೆರೆಹೊರೆಯ ಮತದಾರರನ್ನೂ ನಿರ್ಭೀಡೆಯಿಂದ ಮತ ಚಲಾಯಿಸುವಂತೆ ಪ್ರೇರೇಪಿಸುವಂತೆ ಕಿವಿಮಾತು ಹೇಳಿದರು.
ಕೆಎಲ್‌ಇ ಸಂಸ್ಥೆಯ ಸಿ.ಎಸ್. ಅಂಗಡಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಎಂ.ಎ. ಪಾಟೀಲ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ’ ವಿಷಯ ಕುರಿತು ಉಪನ್ಯಾಸ ನೀಡಿದರು.ಸಮಿತಿ ಕಾರ್ಯದರ್ಶಿಯೂ ಆದ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಧೀಶ ರಾಜೀವ ಗೊಳಸಾರ, 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಸೂರ್ಯಪ್ರಭ ಎಚ್.ಡಿ. ಮತ್ತು 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ರೂಪಾ ಮಟ್ಟಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು. ಕನ್ನಡ ಉಪನ್ಯಾಸಕಿ ವಿ.ಆರ್. ಗುರವ ನಿರೂಪಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಎಂ. ಬಿರಾದಾರ ವಂದಿಸಿದರು.