ಮತದಾನ ದೇಶದ ಭವಿಷ್ಯ ನಿರ್ಧರಿಸುವ ಪ್ರಬಲ ಶಕ್ತಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್

| Published : May 04 2024, 12:37 AM IST

ಮತದಾನ ದೇಶದ ಭವಿಷ್ಯ ನಿರ್ಧರಿಸುವ ಪ್ರಬಲ ಶಕ್ತಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರು ಕಡ್ಡಾಯವಾಗಿ ಮತಚಲಾವಣೆ ಮಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ವಿದ್ಯಾನಗರ ಹಾಗೂ ದೋಣಿಮಲೈನಲ್ಲಿ ಅತಿ ಕಡಿಮೆ ಮತದಾನವಾಗಿತ್ತು.

ಸಂಡೂರು: ಮತದಾನ ಎನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕವಾಗಿದೆ. ಮತದಾನ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಶಕ್ತಿಯಾಗಿದೆ. ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರ್ ಅಭಿಪ್ರಾಯಪಟ್ಟರು.

ತಾಲೂಕಿನ ವಿದ್ಯಾನಗರದ ಜೆ ಮ್ಯಾಕ್ಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ಮತ್ತು ಜೆಎಸ್‌ಡಬ್ಲು ಫೌಂಡೇಶನ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಕಡ್ಡಾಯವಾಗಿ ಮತಚಲಾವಣೆ ಮಾಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನ ವಿದ್ಯಾನಗರ ಹಾಗೂ ದೋಣಿಮಲೈನಲ್ಲಿ ಅತಿ ಕಡಿಮೆ ಮತದಾನವಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತಚಲಾಯಿಸುವ ಮೂಲಕ ಮತದಾನ ಪ್ರಮಾಣದಲ್ಲಿ ವಿದ್ಯಾನಗರಕ್ಕೆ ಅಂಟಿರುವ ಕಪ್ಪುಚುಕ್ಕೆಯನ್ನು ಅಳಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಚ್.ಷಡಾಕ್ಷರಯ್ಯ ಮಾತನಾಡಿ, ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದೆ. ಒಂದೊಂದು ಮತಕ್ಕೂ ದೇಶದ ಗತಿಯನ್ನು ಬದಲಾಯಿಸುವ ಶಕ್ತಿ ಇದೆ. ತಾಲೂಕಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಲವು ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೆಎಸ್‌ಡಬ್ಲು ನೌಕರರು ಹಾಗೂ ಕುಟುಂಬದ ಸದಸ್ಯರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ವಿದ್ಯಾನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಂತೆ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಫೌಂಡೇಶನ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ (ಅಡ್ಮಿನ್) ಸುನಿಲ್ ರಾಲ್ಫ್ ಮಾತನಾಡಿ, ನಮ್ಮ ಮತ ನಮ್ಮ ಹಕ್ಕು. ಕಂಪನಿಯ ನೌಕರರು ಮತ್ತು ಕುಟುಂಬದವರು ಯಾವುದೇ ನಿರ್ಲಕ್ಷ ಮಾಡದೆ, ಕಡ್ಡಾಯವಾಗಿ ಮತವನ್ನು ಚಲಾಯಿಸಿ, ಮತದಾನ ಪ್ರಮಾಣದಲ್ಲಿ ವಿದ್ಯಾನಗರಕ್ಕೆ ಅಂಟಿರುವ ಕಪ್ಪು ಚುಕ್ಕೆಯನ್ನು ಅಳಿಸಬೇಕು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿಗುರು ಕಲಾ ತಂಡದ ಕಲಾವಿದರಾದ ಹುಲುಗಪ್ಪ ಮತ್ತು ಸಂಗಡಿಗರು ಮತದಾನದ ಮಹತ್ವ ಸಾರುವ ನಾಟಕ ಹಾಗೂ ಹಾಡುಗಳನ್ನು ಪ್ರಸ್ತುತಪಡಿಸಿದರು.

ಸಹಾಯಕ ಚುನಾವಣಾಧಿಕಾರಿ ಸತೀಶ್, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ವಡ್ಡು ಪಿಡಿಒ ರಂಗಸ್ವಾಮಿ, ಕಾರ್ಯದರ್ಶಿ ಜುಬೇರ್ ಅಹಮದ್, ತಾಲೂಕು ಪಂಚಾಯ್ತಿ ಸಿಬ್ಬಂದಿ ವೆಂಕಪ್ಪ, ಕಂಪನಿ ನೌಕರರು ಉಪಸ್ಥಿತರಿದ್ದರು. ಹುಲುಗಪ್ಪ ಪ್ರಾರ್ಥಿಸಿದರು. ಪದ್ಮನಾಭ ಸ್ವಾಗತಿಸಿದರು. ಶಿಕ್ಷಕ ಜಿ.ಎಂ. ಪ್ರದೀಪ್‌ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿ, ಕಾರ್ಯಕ್ರಮ ನಿರೂಪಿಸಿದರು.