ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ನೀಡಿದ್ದು, ಆ ಒಂದು ಮತದಿಂದ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹೇಳಿದರು.ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಭಾಭವನದಲ್ಲಿ ಶನಿವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಯುವ ಮತದಾರರು ಮತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ನಮ್ಮನ್ನು ಆಳುವ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮೇಲ್ಲರ ಮೇಲೆ ಇದ್ದು, ಮತದಾನದ ಹಕ್ಕು ಚಲಾಯಿಸುವುದು ಕಡ್ಡಾಯ ಹಾಗೂ ಕರ್ತವ್ಯವಾಗಿದೆ ಎಂದರು.
ಇತ್ತೀಚಿನ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಮತದಾನವಾಗುತ್ತಿದೆ. ಆದರೆ ನಗರ ಪ್ರದೇಶಗಳಲ್ಲಿ ಮತದಾನ ಕುಂಠಿತಗೊಳ್ಳುತ್ತಿದೆ. ಮತದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ. ಪ್ರಜ್ಞಾವಂತ ನಾಗರಿಕರು ದೇಶದ ಭವಿಷ್ಯಕ್ಕಾಗಿ ಪ್ರಜಾಪ್ರಭುತ್ವದಲ್ಲಿ ತಮಗೆ ನೀಡಿರುವ ಮತದಾನದ ಹಕ್ಕನ್ನು ಚಲಾಯಿಸಲು ಮುಂದಾಗಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿ, ಮತದಾನದ ಪವಿತ್ರತೆ ಅರಿಯಲು ಮತದಾನ ದಿನಾಚರಣೆ ಆಚರಿಸಲಾಗುತ್ತಿದೆ. ಸಂವಿಧಾನದ ಆಶಯದಂತೆ ಮತ್ತು ಅದರ ಅನುಚ್ಛೇದದ ಅಡಿಯಲ್ಲಿ ಭಾರತ ಚುನಾವಣಾ ಆಯೋಗ ರಚನೆಯಾಗಿದೆ. 1950 ಜ.25ರಂದು ರಚನೆಗೊಂಡ ಈ ಕಾರ್ಯ ಇಂದಿಗೆ 75 ವರ್ಷದ ಇತಿಹಾಸ ಹೊಂದಿದೆ. ಆದ್ದರಿಂದ ಇಂತಹ ಮಹತ್ವದ ಹಕ್ಕನ್ನು ಪ್ರತಿಯೊಬ್ಬರು ಚುನಾವಣೆ ಸಂದರ್ಭದಲ್ಲಿ ಚಲಾಯಿಸಬೇಕು ಎಂದರು.
ಮೂಲಭೂತ ಹಕ್ಕುಗಳಲ್ಲಿ ಮತದಾನ ಮಾಡುವುದು ಕೂಡಾ ಪ್ರತಿಯೊಬ್ಬರ ಹಕ್ಕಾಗಿದೆ. ಇಂದು ಭಾರತ ದೇಶದಲ್ಲಿ ನೂರು ಕೋಟಿ ಮತದಾರರ ಪೈಕಿ 18 ರಿಂದ 29ರ ನಡುವಿನ ವಯೋಮಿತಿಯ 21 ಕೋಟಿ ಯುವ ಮತದಾರರಿದ್ದಾರೆ. ಅವರಲ್ಲಿ ಶೇ.35ರಷ್ಟು ಮಾತ್ರ ಮತದಾನ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಮತದಾನ ಪಾವಿತ್ರ್ಯತೆಯ ಬಗ್ಗೆ ಅರಿವು ಮೂಡಿಸಬೇಕಿದೆ. ಮತದಾನದ ಹಕ್ಕು ಒಬ್ಬ ಕೂಲಿ ಕಾರ್ಮಿಕರಿಂದ ಹಿಡಿದು ರಾಷ್ಟ್ರಪತಿಯವರೆಗೆ ಅದರ ಮೌಲ್ಯ ಒಂದೇ ಆಗಿರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಮತದಾನದ ದಿನಾಚರಣೆ ಅಂಗವಾಗಿ ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ, ಬಿತ್ತಿಚಿತ್ರ, ರೀಲ್ಸ್ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ನ್ಯಾಯಾಧೀಶರಾದ ಕ್ರೀಷ್ಣಮೂರ್ತಿ ಪಡಸಲಗಿ, ಚಂದ್ರಶೇಖರ ದಿಡ್ಡಿ, ತೋವಿವಿಯ ಶಿಕ್ಷಣ ನಿರ್ದೇಶಕ ಎನ್.ಕೆ.ಹೆಗಡೆ, ವಿಸ್ತರಣಾಧಿಕಾರಿ ಮಹಾದೇವ ಮುರಗಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿವಿಧ ತರಬೇತುದಾರರಿಗೆ ಪ್ರಶಸ್ತಿರಾಜ್ಯ ಮಟ್ಟದ ಉತ್ತಮ ತರಬೇತುದಾರರ ಪ್ರಶಸ್ತಿಗೆ ಆಯ್ಕೆಯಾದ ಸಂಗಮೇಶ ಸಣ್ಣತಂಗಿ, ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಲಕ್ಷ್ಮೀಕಾಂತ ಮಮದಾಪೂರ, ಸಿ.ಎಕ್ಸ್.ಸಂಗಮ, ಉತ್ತರ ಇಲ್‌ಸಿಗಳಾದ ಅರುಣಕುಮಾರ ಗಾಳಿ, ಜಿ.ಬಿ.ಕುಲಕರ್ಣಿ, ಸರಕಾರಿ ಪ್ರೌಢಶಾಲೆ ಸೀತಿಮನಿ, ಉತ್ತಮ ಎಎಲ್ಎಂಟಿ ಉಮೇಶ ಗಣಿ, ಮತಗಟ್ಟೆ ಮಟ್ಟದ ಮೇಲ್ವಿಚಾರಕರಾದ ಶ್ರೀಕಾಂತ ಪಾಟೀಲ, ವಿಜಯಕುಮಾರ ದೇಶಮಾನೆ, ಉತ್ತಮ ಬಿಎಲ್‌ಓಗಳಾದ ಇಂದ್ರಾಬಾಯಿ ದೇಸಾಯಿ, ಬಳೂರಗಿ ಎಸ್.ಎಸ್. ಅವರಿಗೆ ಪ್ರಶಸ್ತಿ ನೀಡಲಾಯಿತು.