ಚಿಕ್ಕಮಗಳೂರುಚುನಾವಣೆ ಎನ್ನುವುದು ಕೇವಲ ಪ್ರಕ್ರಿಯೆಯಲ್ಲ. ಅದು ದೇಶದ ಭವಿಷ್ಯ ನಿರ್ಧರಿಸುವ ಪವಿತ್ರ ಕಾರ್ಯ. ಯಾವುದೇ ಜಾತಿ, ಮತ, ಧರ್ಮ ಅಥವಾ ಹಣದ ಆಮಿಷಗಳಿಗೆ ಬಲಿಯಾಗದೇ ನಿಸ್ವಾರ್ಥ ಸೇವೆ ಮಾಡುವ ನಾಯಕರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

- ಕುವೆಂಪು ಕಲಾಮಂದಿರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚುನಾವಣೆ ಎನ್ನುವುದು ಕೇವಲ ಪ್ರಕ್ರಿಯೆಯಲ್ಲ. ಅದು ದೇಶದ ಭವಿಷ್ಯ ನಿರ್ಧರಿಸುವ ಪವಿತ್ರ ಕಾರ್ಯ. ಯಾವುದೇ ಜಾತಿ, ಮತ, ಧರ್ಮ ಅಥವಾ ಹಣದ ಆಮಿಷಗಳಿಗೆ ಬಲಿಯಾಗದೇ ನಿಸ್ವಾರ್ಥ ಸೇವೆ ಮಾಡುವ ನಾಯಕರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ನಿಜವಾದ ಪ್ರಭು. ನೈತಿಕತೆಯಿಂದ ಮತ ಚಲಾಯಿಸಿದಾಗ ಮಾತ್ರ ಸಮರ್ಥ ನಾಯಕರನ್ನು ಆಯ್ಕೆ ಮಾಡಲು ಮತ್ತು ದೇಶದ ಭವಿಷ್ಯ ಉಜ್ವಲಗೊಳಿಸಲು ಸಾಧ್ಯವಾಗಲಿದೆ ಎಂದರು. ಭಾರತೀಯ ಚುನಾವಣಾ ಆಯೋಗ 1950 ರ ಜನವರಿ 25 ರಂದು ಜಾರಿಗೆ ಬಂದಿತು. ಈ ದಿನದ ಸವಿನೆನಪಿಗಾಗಿ 2011 ರಿಂದ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದ ಅವರು, 18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಪ್ರಜಾ ಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಮಾತನಾಡಿ, ಮತದಾನ ಎನ್ನುವುದು ಪ್ರಜಾಪ್ರಭುತ್ವದ ಆಸ್ತಿತ್ವ ಉಳಿಸುವ ವಜ್ರಾಯುಧ. ಆಮಿಷಗಳಿಗೆ ಬಲಿಯಾಗಿ ಮತ ಮಾರಿಕೊಳ್ಳುವುದು ತಾಯಿಯನ್ನು ಮಾರಿಕೊಂಡಂತೆ. ಮತದಾನದ ಸಮಯದಲ್ಲಿ ಹಂಚಲಾಗುವ ಹಣ, ಮದ್ಯ ಅಥವಾ ಸೀರೆಯಂತಹ ಉಡುಗೊರೆಗಳಿಗೆ ಮತದಾರರು ಮಾರು ಹೋಗಬಾರದು. ಇದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು ಎಂದು ಕಿವಿಮಾತು ಹೇಳಿದರು.ಯಾವುದೇ ಜಾತಿ, ಧರ್ಮ, ಪ್ರಭಾವಕ್ಕೆ ಒಳಗಾಗದೇ ದೇಶದ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಯೋಚಿಸಿ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ, ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಅರ್ಹ ಮತದಾರರು ಜವಾಬ್ದಾರಿಯುತವಾಗಿ ಚಲಾಯಿಸಬೇಕು. ಯಾವುದೇ ಹಣ, ಉಡುಗೊರೆ ಅಥವಾ ಆಮಿಷಗಳಿಗೆ ಒಳಗಾಗದೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.ಯುವ ಜನತೆಯನ್ನು ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ರಾಷ್ಟ್ರೀಯ ಮತದಾರರ ದಿನಾಚರಣೆ ಮಹತ್ವದ ಪಾತ್ರವಹಿಸಲಿದ್ದು, 18 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಮತದಾರರ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದ್ದರು. ತಹಸೀಲ್ದಾರ್ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. 25 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯ ಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಪಂ ಸಿಇಒ ಕೀರ್ತನಾ ಇದ್ದರು.