ಮತದಾನವು ಜೀವನದ ಶ್ರೇಷ್ಠವಾದ ದಾನ: ಡಾ. ವಿನಾಯಕ್ ಭಟ್ಟ

| Published : May 07 2024, 01:09 AM IST

ಸಾರಾಂಶ

ಪ್ರಜ್ಞಾವಂತರಾದ ನಾವು ಎಲ್ಲರೂ ಜಾಗೃತರಾಗಿ ನೂರು ಪ್ರತಿಶತ ಮತದಾನವಾಗುವತ್ತ ಮುನ್ನಡೆಯಬೇಕಾಗಿದೆ ಆಗ ಮಾತ್ರ ಸುಭದ್ರ ಸರ್ಕಾರ ಮತ್ತು ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿನಾಯಕ್ ಭಟ್ಟ ತಿಳಿಸಿದರು.

ಶಿರಸಿ: ಮತದಾನವು ಜೀವನದ ಶ್ರೇಷ್ಠವಾದ ದಾನವಾಗಿದ್ದು, ಅದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕೆಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿನಾಯಕ್ ಭಟ್ಟ ತಿಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೂರಕ್ಕೆ ನೂರು ಪ್ರತಿಶತ ಮತದಾನವಾಗದಿದ್ದರೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗದೆ ಇರಬಹುದು. ಹಾಗಾಗಿ ಪ್ರಜ್ಞಾವಂತರಾದ ನಾವು ಎಲ್ಲರೂ ಜಾಗೃತರಾಗಿ ನೂರು ಪ್ರತಿಶತ ಮತದಾನವಾಗುವತ್ತ ಮುನ್ನಡೆಯಬೇಕಾಗಿದೆ ಆಗ ಮಾತ್ರ ಸುಭದ್ರ ಸರ್ಕಾರ ಮತ್ತು ಬಲಿಷ್ಠ ದೇಶ ಕಟ್ಟಲು ಸಾಧ್ಯ ಎಂದರು.

ಜಾಗೃತಿ ಕಾರ್ಯಕ್ರಮದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಹೊಸಮನಿ, ಮತದಾನದ ಕುರಿತು ನನ್ನ ಮತ ನನ್ನ ಹಕ್ಕು ಎಂದರು.

ಶಿರಸಿ ತಾಲೂಕಿನ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಉದಯ ಶಂಕರ್ ಭಂಡಾರಿ ಮಾತನಾಡಿ, ಚುನಾವಣಾ ಪರ್ವ ದೇಶದ ಗರ್ವ, ಮತದಾನ ಕೇವಲ ಹಕ್ಕು ಮಾತ್ರ ಅಲ್ಲ ಅದು ಕರ್ತವ್ಯ ಸಹ ಹೌದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೌರಿ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಯ್ಯ ಹಿರೇಮಠ ವಂದಿಸಿದರು. ಜಾಗೃತಿ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಮೇಲ್ವಿಚಾರಕ ಸಿಬ್ಬಂದಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಎಂಇಎಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾಸರಕೋಡದಲ್ಲಿ ಮತದಾನ ಜಾಗೃತಿ

ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾಪಂ ವ್ಯಾಪ್ತಿಯ ಟೊಂಕಾ ಮಲ್ಲುಕುರ್ವಾ ಪ್ರದೇಶದಲ್ಲಿ ಮೀನುಗಾರರಿಂದ ಮತದಾನ ಬಹಿಷ್ಕಾರ ನಿರ್ಧಾರದ ಬಗ್ಗೆ ಪತ್ರಿಕಾ ವರದಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ತಾಲೂಕು ಸ್ವೀಪ್ ಸಮಿತಿ, ಹೊನ್ನಾವರ ತಾಪಂ ಮತ್ತು ಕಾಸರಕೋಡ ಗ್ರಾಪಂಗಳ ವತಿಯಿಂದ ಈ ಭಾಗದಲ್ಲಿ ಶನಿವಾರ ಬೃಹತ್ ಮತದಾನ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.ಈ ಜಾಥಾದಲ್ಲಿ ಎಸ್‌ಡಿಎಂ ಕಾಲೇಜು ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಹಿರೇಮಠ ಸರ್ಕಲ್‌ನಿಂದ ಪ್ರಾರಂಭಗೊಂಡು ಟೊಂಕಾ ರಸ್ತೆ, ಕಾಸರಕೋಡ ಬಂದರು, ಸಮುದ್ರ ತೀರ ಮತ್ತು ಒಳಗಿನ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿ ಜಾಥಾದಲ್ಲಿ ಧ್ವನಿವರ್ಧಕದ ಮೂಲಕ ಮತದಾನದ ಪ್ರಾಮುಖ್ಯತೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಜಾಥಾ ಸಂದರ್ಭದಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ ಮೇ 7ರಂದು ತಪ್ಪದೇ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಿ ಎಂದು ಆಮಂತ್ರಣ ಪತ್ರಗಳನ್ನು ನೀಡುವ ಮೂಲಕ ಕೋರಿದರು.ಜಾಥಾದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜೆ. ಆನಂದ, ಸಹಾಯಕ ನಿರ್ದೇಶಕ (ಗ್ರಾ.ಉ.) ಕೃಷ್ಣಾನಂದ, ಎಸ್.ಡಿ.ಎಂ. ಕಾಲೇಜು ಮತ್ತು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಧ್ಯಾಪಕರು, ವ್ಯವಸ್ಥಾಪಕ ರಾಮ ಭಟ್ಟ, ಆರಕ್ಷಕ ಸಿಬ್ಬಂದಿ, ಯುವಜನ ಸೇವಾಧಿಕಾರಿ ಸುಧೀಶ ನಾಯ್ಕ, ಕಾಸರಕೋಡ ಪಿಡಿಒ ಉದಯ ಬಾಂದೇಕರ, ತಾಪಂ ಮತ್ತು ಇತರ ಗ್ರಾಪಂ, ಪಿಡಿಒ ಹಾಗೂ ಸಿಬ್ಬಂದಿ ಭಾಗವಹಿಸಿದರು.