ಪ್ರಜಾಪ್ರಭುತ್ವದ ಗೌರವ ಎತ್ತಿ ಹಿಡಿಯಲು ಮತದಾನ ಅವಶ್ಯ

| Published : Apr 18 2024, 02:18 AM IST

ಪ್ರಜಾಪ್ರಭುತ್ವದ ಗೌರವ ಎತ್ತಿ ಹಿಡಿಯಲು ಮತದಾನ ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಒಂದು ಮತ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮತವಾಗಬೇಕು

ನರಗುಂದ: ದೇಶದಲ್ಲಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕು ದೇಶದ ಸಂಸತ್ತನ್ನು ನಿರ್ಮಿಸುವ ಹಕ್ಕಾಗಿದೆ. ಹೀಗಾಗಿ ನಾವೇಲ್ಲರು ಚುನಾವಣೆ ದಿನ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ನರಗುಂದ ವಿಧಾನಸಭಾ ಚುನಾವಣಾ ಸಹಾಯಕ ಚುನಾವಣಾ ಅಧಿಕಾರಿ ಡಾ. ಹಂಪಣ್ಣ ಸಜ್ಜನರ ಹೇಳಿದರು.

ಅವರು ಬುಧವಾರ ತಾಲೂಕಿನ ಅರಿಶಿಣಗೋಡಿ ಗ್ರಾಮದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕೈಗೊಂಡ ನರೇಗಾ ಕೂಲಿಕಾರರಿಗೆ ಕಡ್ಡಾಯ ಮತದಾನ ಜಾಗೃತಿ ಕಾರ್ಯಕ್ರಮಲ್ಲಿ ಮಾತನಾಡಿ, ಪ್ರಜಾಪ್ರಭುತ್ವದ ದೇಶದಲ್ಲಿ ಜನರೇ ಜನರಿಗೋಸ್ಕರ ಜನರಿಗಾಗಿ ಸರ್ಕಾರವನ್ನು ಆಯ್ಕೆ ಮಾಡಬೇಕಾಗಿದೆ. ಸುಭದ್ರ ಸರ್ಕಾರ ರಚನೆಗೆ ಪ್ರತಿಯೊಬ್ಬರ ಮತದಾನ ಪ್ರಮುಖವಾಗಿದೆ. ಅರ್ಹ ಅಭ್ಯರ್ಥಿ ಮತದಾರರು ಆಯ್ಕೆ ಮಾಡಿದರೆ ಮತದಾರನ ಕ್ಷೇತ್ರ ಮತ್ತು ಜಿಲ್ಲೆಗಳು ಅಭಿವೃದ್ಧಿಯಾಗುತ್ತವೆ.ಕೂಲಿಕಾರರು ಮೇ7 ರಂದು ಮತದಾನದಿಂದ ತಪ್ಪಿಸಿಕೊಳ್ಳಬಾರದು. ಸ್ವಂತ ಊರಿನಿಂದ ಬೇರೆ ಊರಿಗೆ ತೆರಳಿರುವ ತಮ್ಮ ಕುಟುಂಬ ಸದಸ್ಯರನ್ನು ಮತದಾನದ ದಿನ ಕರೆಸಿಕೊಂಡು ಮತದಾನ ಮಾಡಿಸಬೇಕೆಂದು ಮನವಿ ಮಾಡಿದರು.

ಚುನಾವಣಾ ಆಯೋಗ ಹಾಗೂ ಜಿಲ್ಲಾ ಮತ್ತು ತಾಪಂಗಳು ಇಡೀ ದೇಶಾದ್ಯಂತ ಸ್ವೀಪ್ ಚಟುವಟಿಕೆ ಮೂಲಕ ಕಡ್ಡಾಯ ಮತದಾನ ಬಗ್ಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಮತ ಹಕ್ಕನ್ನು ಚಲಾಯಿಸಿದಾಗ ಮಾತ್ರ ಸ್ವೀಪ್ ಸಮಿತಿ ಕಾರ್ಯ ಯಶಸ್ವಿಯಾಗುತ್ತದೆ. ನಮ್ಮ ಒಂದು ಮತ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮತವಾಗಬೇಕು ಎಂದರು.

ಕಾಮಗಾರಿ ಸ್ಥಳದಲ್ಲಿದ್ದ 300ಕ್ಕೂ ಅಧಿಕ ಕೂಲಿಕಾರರಿಗೆ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರು ಮಾನವ ಸರಪಳಿ ರಚಿಸುವ ಮೂಲಕ ಕಡ್ಡಾಯ ಮತದಾನ ಬಗೆಗಿನ ಘೋಷಣೆ ಕೂಗಿದರು.

ತಾಪಂ ಅಧಿಕಾರಿ ಸೋಮಶೇಖ ಬಿರಾದಾರ, ಹಿರೇಕೊಪ್ಪ ಪಿಡಿಓ ಕೆ.ಎನ್. ಹದಗಲ್, ಜಿಲ್ಲಾ ಐಇಸಿ ಸಂಯೋಜಕ ವೀರಭದ್ರಪ್ಪ ಸಜ್ಜನ, ತಾಲೂಕು ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಂತ್ರಿಕ ಸಹಾಯಕ ಅಲ್ತಾಪ ಅಮೀನಬಾವಿ, ಬಿಎಫ್‌ಟಿ ಬಸವರಾಜ ಚಿಮ್ಮನಕಟ್ಟಿ, ಹಿರೇಕೊಪ್ಪ ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.