ಮತದಾನ ನಮ್ಮ ಹಕ್ಕು, ಅರಿತು ಮತ ಚಲಾಯಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

| Published : Mar 30 2024, 12:51 AM IST

ಮತದಾನ ನಮ್ಮ ಹಕ್ಕು, ಅರಿತು ಮತ ಚಲಾಯಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಜಿಪಂ ಸಿಇಓ ಡಾ. ಗಿರೀಶ್ ಬದೋಲೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಫ್ ಸಮಿತಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಬೀದರ್‌ ನಗರದಲ್ಲಿ ಮತದಾನ ಜಾಗೃತಿ ಕುರಿತು ಹಮ್ಮಿಕೊಂಡಿದ್ದ ವಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿ ಮನೆಯಲ್ಲಿ ಎಲ್ಲರೂ ಮತದಾನ ಮಾಡುವದರ ಜೊತೆಗೆ ತಮ್ಮ ಅಕ್ಕ-ಪಕ್ಕದ ಜನರಿಗೆ ಮತದಾನ ಮಾಡುವಂತೆ ತಿಳಿಹೇಳಬೇಕು. ಮತದಾನ ನಮ್ಮ ಹಕ್ಕು ಅದನ್ನು ಎಲ್ಲರೂ ಅರಿತು ಮತ ಚಲಾಯಿಸಬೇಕು ಮತ್ತು ದೇಶದ ಭವಿಷ್ಯಕ್ಕೆ ನಮ್ಮ ಒಂದು ಓಟು ಬಹಳ ಮುಖ್ಯವಾಗಿದೆ ಎಂದರು.

ಬೀದರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮತದಾನ ಜಾಗೃತಿ ಕುರಿತು ವಾಕಥಾನ್‌ ಸೇರಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈ ವಾಕಥಾನ್‌ ಕಾರ್ಯಕ್ರಮದಲ್ಲಿ ನಿರೀಕ್ಷೆಗೆ ಮೀರಿ ಹೆಚ್ಚಿನ ಜನರು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದಕ್ಕೆ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಜಿಪಂ ಸಿಇಓ ಡಾ. ಗಿರೀಶ್ ಬದೋಲೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಎಲ್ಲಾ ಇಲಾಖೆಗಳಲ್ಲಿ ವಿವಿಧ ಸ್ವೀಫ್ ಕಾರ್ಯಕ್ರಮ ಮಾಡುವ ಮೂಲಕ ಬೀದರ್‌ ಜಿಲ್ಲೆಯಲ್ಲಿ ಈ ಸಲ ಕಳೆದ ವರ್ಷಕ್ಕಿಂತ ಹೆಚ್ಚಿನ ಮತದಾನವಾಗುವಂತೆ ನೋಡಿಕೊಳ್ಳಬೇಕು. ಸ್ವೀಫ್ ಜಾಗೃತಿ ಕುರಿತು ಕ್ರಿಕೆಟ್ ಪಂದ್ಯವು ನಡೆಯುತ್ತಿದ್ದು ಒಟ್ಟು ನಾಲ್ಕು ಟೀಂಗಳಿದ್ದು ಪ್ರತಿ ತಂಡಕ್ಕು ಮತದಾನ ಜಾಗೃತಿ ಕುರಿತ ಚುನಾವಣಾ ಆ್ಯಪ್‌ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಕಲ್ಯಾಣ ಕರ್ನಾಟಕದ ಕಿರೀಟವಾದ ಬೀದರನಲ್ಲಿ ಈ ಸಲ ಹೆಚ್ಚಿನ ಮತದಾನವಾಗುವಂತೆ ಎಲ್ಲರೂ ನೋಡಿಕೊಳ್ಳಬೇಕು ವಾಕಥಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಇದರಂತೆ ಜಿಲ್ಲೆಯ ಎಲ್ಲಾ ಇತರೆ ತಾಲೂಕಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮಾಡೋಣ. ನಮ್ಮ ಪೊಲೀಸ್ ಇಲಾಖೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ನಮ್ಮ ಎರಡು ಪೊಲೀಸ್ ಡಾಗ್‌ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದು ಹೇಳಿದರು.

ಮತದಾನ ಜಾಗೃತಿ ಕುರಿತ ವಾಕಥಾನ ಕಾರ್ಯಕ್ರಮ ಬರೀದಶಾಹಿ ಗಾರ್ಡನ್ ನಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ಅದ್ಧೂರಿಯಾಗಿ ಜರುಗಿತು. ನಂತರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಎಲ್ಲರೂ ಸೇರಿ ಸ್ವೀಫ್ ಲೋಗೋ ನಿರ್ಮಿಸಿ ನೋಡುಗರ ಗಮನ ಸೆಳೆದರು.

ಸ್ವೀಫ್ ಸೆಲ್ಪಿ ಪಾಯಿಂಟ್ ನಿರ್ಮಿಸಲಾಗಿತ್ತು, ಅಲ್ಲಿ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ತಮ್ಮ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಸ್ವೀಫ್ ಕ್ರಿಕೆಟ್ ಪಂದ್ಯಾವಳಿಯನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೆಘಣ್ಣವರ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ ಕೋಲಾರ, ಜಿಲ್ಲಾ ಸ್ವೀಫ್ ನೋಡಲ್ ಅಧಿಕಾರಿ ಗೌತಮ ಅರಳಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಚಂದ್ರಕಾಂತ ಶಾಬಾದಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಪ್ರಭಾಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೆಶಕ ಸಲೀಂಪಾಶಾ, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೆಶಕ ಸುರೇಖಾ, ಡಿವೈಎಸ್ಪಿ ಶಿವನಗೌಡ ಪಾಟೀಲ್ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ವಿವಿಧ ಶಾಲಾ- ಕಾಲೇಜುಗಳು ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.