ಸಾರಾಂಶ
ಹುಬ್ಬಳ್ಳಿ:
ಚುನಾವಣೆ ನೀತಿ ಸಂಹಿತೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಿಗೆ ಕುಂಕುಮ, ಅರಿಶಿಣ, ಹೂ ಸೇರಿದಂತೆ ಪೂಜೆ ಮಾಡುವುದನ್ನು ನಿರ್ಬಂಧಿಸಲಾಗಿದ್ದು, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದಾಗಿ ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.ನಗರದ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಗುರುವಾರ ಆಯೋಜಿಸಿದ್ದ ನೀತಿ ಸಂಹಿತೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮತದಾನ ದಿನದಂದು ಮತಗಟ್ಟೆಗಳಲ್ಲಿ ಈ ಬಗ್ಗೆ ನಿಗಾ ವಹಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡುತ್ತೇವೆ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘಿಸಿದರೆ ಚುನಾವಣಾ ನಿಯಮಾವಳಿಯಂತೆ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಡಿಸಿ ಸ್ಪಷ್ಟಪಡಿಸಿದರು.ಇತ್ತೀಚೆಗೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಪ್ರಕರಣ ಉಲ್ಲೇಖಿಸಿದ ಅವರು, ಈ ತೆರನಾದ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು. ಅಲ್ಲದೇ ಹೆಬ್ಬಳ್ಳಿ ಪ್ರಕರಣದ ಬಗ್ಗೆ ವರದಿ ನೀಡುವಂತೆ ಜಿಪಂ ಸಿಇಒ ಅವರಿಗೆ ತಿಳಿಸಲಾಗಿದೆ ಎಂದ ಅವರು, ದೇವಸ್ಥಾನ, ಮಠ, ಮಂದಿರಗಳಲ್ಲೂ ಪ್ರಚಾರ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ ಅವರು, ಪಕ್ಷದ ಕಚೇರಿಗಳಲ್ಲಿ ಸಭೆ, ಸಮಾರಂಭಗಳಲ್ಲಿ ಸೇರುವ ಜನರಿಗೆ ಊಟ, ಉಪಹಾರ, ಚಹ, ಕಾಫಿ ಪೂರೈಸುವುದು ಕೂಡ ಚುನಾವಣಾ ಲೆಕ್ಕದ ವ್ಯಾಪ್ತಿಗೆ ಒಳಪಡಲಿದೆ ಎಂದರು.
ಒಬ್ಬ ವ್ಯಕ್ತಿ ದಾಖಲೆ ರಹಿತವಾಗಿ ₹ 49,999 ವರೆಗೂ ಜೇಬು, ಬ್ಯಾಗ್‌ನಲ್ಲಿ ಒಯ್ಯಬಹುದು. ₹ 50 ಸಾವಿರ ಮತ್ತು ಮೇಲ್ಪಟ್ಟ ಹಣಕ್ಕೆ ಕಡ್ಡಾಯವಾಗಿ ದಾಖಲೆ ಹೊಂದಿರಲೇಬೇಕು ಎಂದು ತಿಳಿಸಿದರು.ಜಿಲ್ಲೆಯ 24 ಚೆಕ್‌ಪೋಸ್ಟ್‌ಗಳಲ್ಲಿ ಇದುವರೆಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ, ಒಡವೆ, ಬಟ್ಟೆ ಒಳಗೊಂಡು ಒಟ್ಟು ₹ 1.23 ಕೋಟಿ ಸೀಜ್ ಮಾಡಲಾಗಿದೆ. ಆದರೆ, ಯಾರ ಮೇಲೂ ದೂರು ದಾಖಲಿಸಿಲ್ಲ. ವಶಪಡಿಸಿಕೊಂಡ ಹಣ, ಒಡವೆ ಹಾಗೂ ಇತರೆ ವಸ್ತುಗಳಿಗೆ ಸಂಬಂಧಿಸಿ ಸೂಕ್ತ ದಾಖಲೆಗಳೊಂದಿಗೆ ಮೂರು ದಿನಗಳೊಳಗೆ ತೋರಿಸಿ ಅವುಗಳನ್ನು ಮರಳಿ ಪಡೆಯಬಹುದಾಗಿದೆ. ಇಲ್ಲಿಯ ವರೆಗೆ ₹ 4.50 ಲಕ್ಷ ದಾಖಲೆ ತೋರಿಸಿ ವಾಪಸ್ ಪಡೆದಿದ್ದಾರೆ ಎಂದು ಡಿಸಿ ಸ್ಪಷ್ಟಪಡಿಸಿದರು.
₹ 38.5 ಲಕ್ಷ ಮೌಲ್ಯದ 778 ಗ್ರಾಂ ಚಿನ್ನ, ₹ 18.71 ಲಕ್ಷ ನಗದು, ₹ 80.9 ಲಕ್ಷ ಗಾಂಜಾ, ಮಾದಕ ವಸ್ತು, ₹ 25.29 ಲಕ್ಷ ಮೌಲ್ಯದ ಮದ್ಯ, 2172 ಸೀರೆ, 1342 ಜೀನ್ಸ್ ಬೆಡ್‌ಶೀಟ್, 480 ಮಿಕ್ಸರ್, 715 ಪಿಲ್ಲೋ ಕವರ್ ಹೀಗೆ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.ಇದಕ್ಕೂ ಮುನ್ನ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಸೋಷಿಯಲ್ ಮಿಡಿಯಾಗಳಿಗೆ ಸಂಬಂಧಿಸಿದ ನೀತಿ ಸಂಹಿತೆ, ಜಾಹೀರಾತು, ಕಾಸಿಗಾಗಿ ಸುದ್ದಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಡಾ. ಸಿದ್ದು ಹುಲ್ಲೊಳಿ ಮಾಹಿತಿ ನೀಡಿದರು. ಸಹಾಯಕ ಚುನಾಣಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.