ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು ಭದ್ರ: ಸರ್ಪಗಾವಲು

| Published : Nov 15 2024, 12:37 AM IST

ಸ್ಟ್ರಾಂಗ್‌ ರೂಂನಲ್ಲಿ ಮತಯಂತ್ರಗಳು ಭದ್ರ: ಸರ್ಪಗಾವಲು
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದ ಮತಯಂತ್ರಗಳನ್ನು ಪೊಲೀಸ್ ಸರ್ಪಗಾವಲಿನಲ್ಲಿ ಇಲ್ಲಿನ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‌ ರೂಂನಲ್ಲಿ ಭದ್ರಪಡಿಸಲಾಗಿದೆ. ನ. 23ರ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ಹಾವೇರಿ: ಶಿಗ್ಗಾಂವಿ ಉಪ ಚುನಾವಣೆಗೆ ಸಂಬಂಧಿಸಿದ ಮತಯಂತ್ರಗಳನ್ನು ಪೊಲೀಸ್ ಸರ್ಪಗಾವಲಿನಲ್ಲಿ ಇಲ್ಲಿನ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‌ ರೂಂನಲ್ಲಿ ಭದ್ರಪಡಿಸಲಾಗಿದೆ. ನ. 23ರ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.ತಡರಾತ್ರಿ ಸುಮಾರು 2 ಗಂಟೆವರೆಗೆ ಮತಯಂತ್ರಗಳನ್ನು ಭಾರಿ ಭದ್ರತೆಯೊಂದಿಗೆ ಸ್ಟ್ರಾಂಗ್ ರೂಮ್‌ಗೆ ರವಾನಿಸಲಾಯಿತು. ದೆಹಲಿಯ ಚುನಾವಣಾ ಸಾಮಾನ್ಯ ವೀಕ್ಷಕ ಕಮಲ್ ರಾಮ್ ಮೀನಾ, ಶಿಗ್ಗಾಂವಿ ಡಿವೈಎಸ್‌ಪಿ ಗುರುಶಾಂತಪ್ಪ, ಶಿಗ್ಗಾಂವಿ ಹಾಗೂ ಸವಣೂರು ತಹಸೀಲ್ದಾರರು, ಇತರ ಅಧಿಕಾರಿಗಳು, ವಿವಿಧ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಇಟ್ಟು ಸೀಲ್ ಮಾಡಲಾಯಿತು. ಬುಧವಾರ ಸಂಜೆವರೆಗೆ ಶೇ.80.48ರಷ್ಟು ಮತದಾನ ಆಗಿತ್ತು. ಅಂತಿಮವಾಗಿ ಶೇ.80.72ರಷ್ಟು ಮತದಾನ ದಾಖಲಾಗಿದೆ. ಕಳೆದ ಬಾರಿಗಿಂತ ಶೇ.1ರಷ್ಟು ಮತದಾನ ಹೆಚ್ಚಳವಾಗಿದೆ.ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಕುತೂಹಲ ಮೂಡಿಸಿದೆ. ಕ್ಷೇತ್ರದ ಮತದಾರರು ಚುನಾವಣಾ ಕಣದಲ್ಲಿರುವ 8 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದಿದ್ದು, ನ.23ರಂದು ಮತಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಎಣಿಕೆಯ ಮೂಲಕ ಯಾರಿಗೆ ಸಿಹಿ, ಕಹಿ ಎಂಬುದು ಬಹಿರಂಗಗೊಳ್ಳಲಿವೆ.ಶಿಗ್ಗಾಂವಿ ಉಪಚುನಾವಣೆಗೆ ಶೇ. 80.72ರಷ್ಟು ಮತದಾನವಾಗಿದೆ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ. 79.94ರಷ್ಟು ಮತದಾನವಾಗಿತ್ತು. 98,642 ಪುರುಷರು, 92,522 ಮಹಿಳೆಯರು, ಇತರೆ ಇಬ್ಬರು ಸೇರಿ 1,91,166 ಮತದಾರರು ಹಕ್ಕು ಚಲಾಯಿಸಿದ್ದು, ಶೇ. 80.48ರಷ್ಟು ಮತದಾನವಾಗಿದೆ. ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕೊಠಡಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸಿ ಸೀಲ್ ಮಾಡಲಾಗಿದೆ. ಈ ಭದ್ರತಾ ಕೊಠಡಿಯ ಕಣ್ಗಾವಲಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸ್ಟ್ರಾಂಗ್ ರೂಮ್ ಸುತ್ತ ಸಿಎಆರ್‌ಎಫ್ ಪ್ಯಾರಾ ಮಿಲಿಟರಿ ಪಡೆ ಹಾಗೂ ಪೊಲೀಸರಿಂದ 24*7 ಕಣ್ಗಾವಲು ಹಾಕಲಾಗಿದೆ. ಎಲ್ಲೆಡೆ ಭದ್ರತೆಗೆ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಸಿಸಿ ಕ್ಯಾಮೆರಾದ ಮೂಲಕ ಮಾನಿಟರಿಂಗ್ ಮಾಡಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಗಮನಿಸಲು ಮೂರು ಶಿಫ್ಟ್‌ನಲ್ಲಿ ಮೂರು ತಂಡ ನಿಯೋಜಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಅಥವಾ ಪಕ್ಷಗಳ ಏಜೆಂಟರು ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.