8 ವಿಧಾಸಭೆ ಕ್ಷೇತ್ರದ 2168 ಮತಗಟ್ಟೆಗಳಲ್ಲಿ 26ರಂದು ಮತದಾನ

| Published : Apr 23 2024, 12:53 AM IST

8 ವಿಧಾಸಭೆ ಕ್ಷೇತ್ರದ 2168 ಮತಗಟ್ಟೆಗಳಲ್ಲಿ 26ರಂದು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ಮತದಾನ ನಡೆಯಲಿದ್ದು ಲೋಕಸಭಾ ಕ್ಷೇತ್ರದ 8 ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ 1856876 ಮತದಾರರು ಮತದಾನದ ಅವಕಾಶ ಪಡೆದಿದ್ದಾರೆ. ಇದಕ್ಕಾಗಿ 2168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮತದಾನದ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ಮತದಾನ ನಡೆಯಲಿದ್ದು ಲೋಕಸಭಾ ಕ್ಷೇತ್ರದ 8 ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ 1856876 ಮತದಾರರು ಮತದಾನದ ಅವಕಾಶ ಪಡೆದಿದ್ದಾರೆ. ಇದಕ್ಕಾಗಿ 2168 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮತದಾನದ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮತದಾನ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚುನಾವಣಾ ಕಣದಲ್ಲಿ 18 ಪುರುಷ ಹಾಗೂ 2 ಮಹಿಳೆಯರು ಸೇರಿ 20 ಅಭ್ಯರ್ಥಿಗಳು ಇದ್ದಾರೆ. ಒಂದು ಬ್ಯಾಲೆಟ್ ಯುನಿಟ್‍ನಲ್ಲಿ 16 ಅಭ್ಯರ್ಥಿಗಳ ವಿವರ ನಮೂದು ಮಾಡಬಹುದಾಗಿದೆ. ಹಾಗಾಗಿ ಈ ಬಾರಿಯ ಮತದಾನದಲ್ಲಿ 2 ಬ್ಯಾಲೆಟ್ ಯುನಿಟ್‍ಗಳು ಇರಲಿವೆ. 20 ಅಭ್ಯರ್ಥಿಗಳು ಒಂದು ನೋಟಾ ಸೇರಿ 21 ವಿವರಗಳನ್ನು ಬ್ಯಾಲೆಟ್ ಯುನಿಟ್‍ನಲ್ಲಿ ನಮೂದು ಮಾಡಲಾಗುವುದು. 2168 ಮತಗಟ್ಟೆಗಳಿಗೆ 4336 ಬ್ಯಾಲೆಟ್ ಯುನಿಟ್, 2168 ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್‍ಗಳು ಬಳಕೆಯಾಗಿಲಿವೆ. ಮುಂಜಾಗೃತವಾಗಿ 947 ಬ್ಯಾಲೆಟ್ ಯುನಿಟ್, 642 ಕಂಟ್ರೋಲ್ ಯುನಿಟ್ ಹಾಗೂ 745 ವಿವಿಪ್ಯಾಟ್‍ಗಳನ್ನು ಹೆಚ್ಚುವರಿವಾಗಿ ಮೀಸಲು ಇರಿಸಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದರು.

54 ವಿಶೇಷ ಮತಗಟ್ಟೆಗಳ ಸ್ಥಾಪನೆ ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರನ್ನು ಆಕರ್ಷಿಸಲು 54 ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾವಾರು ಮಹಿಳಾ ಮತದಾರರು ಹೆಚ್ಚಿರುವ 5 ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಲಿದ್ದಾರೆ. ಇದೇ ಮಾದರಿಯಲ್ಲಿ ಪ್ರತಿ ವಿಧಾನ ಸಭಾವಾರು 6 ವಿಶೇಷ ಚೇತನ, ಯುವ, ವಿಷಯಾಧಾರಿತ ಹಾಗೂ ಸ್ಥಳೀಯ ಇತಿಹಾಸ ಪರಂಪರೆ, ಸಂಸ್ಕೃತಿ ಬಿಂಬಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳಲ್ಲಿ ತೆಂಗಿನ ಚಪ್ಪರ ಹಾಗೂ ಶಾಮೀಯಾನ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

7.53 ಕೋಟಿ ರು. ಮೌಲ್ಯದ ಹಣ, ವಸ್ತುಗಳ ವಶ

ಮಾದರಿ ನೀತಿ ಸಂಹಿತೆ ಪಾಲನೆಗಾಗಿ 30 ಎಫ್ಎಸ್‌ಟಿ, 48 ಎಸ್ಎಸ್‌ಟಿ, 8 ವಿಎಸ್‌ಟಿ, ವಿವಿಟಿ, ಎಟಿ ಹಾಗೂ ಎಇಓ ತಂಡಗಳನ್ನು ಹಾಗೂ 195 ಸೆಕ್ಟರ್ ಆಫೀಸರ್‍ಗಳನ್ನು ನೇಮಿಸಲಾಗಿದೆ. ಇದುವರೆಗೂ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ರು 2,49,76,348 ನಗದು, ರು.1,40,43,006 ಮೌಲ್ಯದ 34142.69 ಲೀಟರ್ ಮದ್ಯ, ರು.3,55,00,000 ಮೌಲ್ಯದ ಸುಮಾರು 5.3 ಕೆ.ಜಿ. ಚಿನ್ನಾಭರಣ, ರು.7,79,160 ಮೌಲ್ಯದ ಉಚಿತ ಕೊಡಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಅಡಿ 863 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

8 ಜನರ ಗಡಿಪಾರು 3300 ಪೊಲೀಸರ ನೇಮಕ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಮತದಾನ ಶಾಂತಿಯುತವಾಗಿ ನಡೆಸುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ 1808 ಜನರ ವಿರುದ್ಧ ಕಾನೂನು ಪ್ರಕ್ರಿಯೆ ಜರುಗಿಸಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಎದುರಿಗೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. 8 ಜನರಿಗೆ ಗಡಿಪಾರು ಮಾಡಲಾಗಿದೆ.

ಜಿಲ್ಲೆಗೆ ಎರಡು ಸಿಆರ್ಪಿ ಎಫ್ ತುಕಡಿಗಳು ಆಗಮಿಸಿವೆ. ಇದುವರೆಗೂ ಜಿಲ್ಲೆಯಲ್ಲಿ ಗಲಭೆ ಉಂಟಾಗುವ 41 ಕಡೆ ಪೊಲೀಸ್ ಬಲ ಪ್ರದರ್ಶನ, 36 ಕಡೆ ರೂಟ್ ಮಾರ್ಚ್ ಮಾಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವೈರ್‍ಲೆಸ್ ಸಂವಹನ ಸ್ಥಾಪಿಸಲಾಗಿದೆ. 20 ಮತಗಟ್ಟೆ ವ್ಯಾಪ್ತಿಯಲ್ಲಿ ಒಂದು ಪಿಎಸ್ಐ ನೇತೃತ್ವದಲ್ಲಿ ಸೆಕ್ಟರ್ ಪೊಲೀಸ್ ತಂಡ, 4 ಸೆಕ್ಟರ್ ಸಂಚಾರಿ ಪೊಲೀಸ್ ತಂಡಗಳ ಮೇಲೆ ಸರ್ಕ್‍ಲ್ ಇನ್ ಸ್ಪೆಕ್ಟರ್‌ಗಳ ಪೊಲೀಸ್ ತಂಡ, 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒರ್ವ ಡಿವೈಎಸ್‍ಪಿ ಹಾಗೂ 2 ಎಎಸ್ ಪಿ ಹಾಗೂ ಒಬ್ಬ ಎಸ್ಪಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟಾರೆ 3300 ಪೊಲೀಸ್ ಸಿಬ್ಬಂದಿ ಮತದಾನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಲ್ಲಿ 950 ಗೃಹ ರಕ್ಷಕರು, 6 ಕೆಎಸ್ಆರ್.ಪಿಸಿ ತುಕಡಿ ಹಾಗೂ ಸಿಆರ್ ಪಿ ಎಫ್ ತುಕಡಿಗಳು ಇರಲಿವೆ. ಜಿಲ್ಲೆಯಲ್ಲಿ 280 ಸೂಕ್ಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದರು.

ಜಿಲ್ಲಾ ಸ್ಪೀಪ್ ಅಧ್ಯಕ್ಷ ಎಸ್.ಜೆ.ಸೋಮಶೇಖರ್ , ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಉಪಸ್ಥಿತರಿದ್ದರು.