ಇಂದು ಮತದಾನ; ತಪ್ಪದೇ ಹಕ್ಕು ಚಲಾಯಿಸಿ

| Published : May 07 2024, 01:09 AM IST

ಸಾರಾಂಶ

ನೂರಾರು ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸರದಿ ಬರುವವರೆಗೂ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಎರಡು ಇವಿಎಂ, ವಿವಿ ಪ್ಯಾಟ್, ಕಂಟ್ರೋಲಿಂಗ್ ಯುನಿಟ್, ಶಾಯಿ, ಸಮೇತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆದೊಯ್ಯಲು ನೂರಾರು ಕೆಎಸ್‍ಆರ್‌ಟಿಸಿ ಬಸ್‌ಗಳು ಕಾಯುತ್ತಿದ್ದವು. ಸಂಜೆಯೊಳಗೆ ಮತಗಟ್ಟೆಗಳಿಗೆ ನಿಯೋಜಿಸಿದ ಸಿಬ್ಬಂದಿ ತಲುಪಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಸೋಮವಾರ ನಿಗದಿಪಡಿಸಿದ ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಮತಯಂತ್ರ ಮತ್ತು ಇತರ ಪರಿಕರಗಳೊಂದಿಗೆ ತೆರಳಿದರು.

ನಗರದ ಎನ್‍ಇಎಸ್ ಮೈದಾನದಲ್ಲಿ ಇದಕ್ಕಾಗಿ ಸಿದ್ಧತೆ ನಡೆಸಲಾಗಿತ್ತು. ದೊಡ್ಡ ದೊಡ್ಡ ಶಾಮಿಯಾನ ಹಾಕಿ ಮತಗಟ್ಟೆಗಳ ಸಿಬ್ಬಂದಿಗಳು ಹೊರಡಲು ಅಣಿಯಾಗುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸರದಿ ಬರುವವರೆಗೂ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಎರಡು ಇವಿಎಂ, ವಿವಿ ಪ್ಯಾಟ್, ಕಂಟ್ರೋಲಿಂಗ್ ಯುನಿಟ್, ಶಾಯಿ, ಸಮೇತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆದೊಯ್ಯಲು ನೂರಾರು ಕೆಎಸ್‍ಆರ್‌ಟಿಸಿ ಬಸ್‌ಗಳು ಕಾಯುತ್ತಿದ್ದವು. ಸಂಜೆಯೊಳಗೆ ಮತಗಟ್ಟೆಗಳಿಗೆ ನಿಯೋಜಿಸಿದ ಸಿಬ್ಬಂದಿ ತಲುಪಿದರು.

ವಿಶೇಷ ಮತಗಟ್ಟೆ ವ್ಯವಸ್ಥೆ:

ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ 17,52,885 ಮತದಾರರಿದ್ದು, ಈ ಪೈಕಿ 8,62,789 ಪುರುಷ, 8,90,061 ಮಹಿಳಾ ಮತದಾರರಿದ್ದಾರೆ. ಮತಗಟ್ಟೆಗೆ ಮತದಾರರನ್ನು ಸೆಳೆಯಲು 40 ಸಖಿ ಮತದಾನ ಕೇಂದ್ರಗಳು, ಯುವ ಮತದಾರರಿಗೆ 8, ವಿಶೇಷ ಚೇತನರಿಗೆ 8 ಮಾದರಿ ಮತಗಟ್ಟೆಗಳು, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತದಾರರಿಗೆ ನೆರಳಿನ ವ್ಯವಸ್ಥೆ

ಜಿಲ್ಲೆಯಲ್ಲಿ 325 ಸೂಕ್ಷ್ಮ ಹಾಗೂ 87 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಇಲ್ಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ 2039 ಮತದಾನ ಕೇಂದ್ರಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರಸ್ತುತ ಬಿಸಿಲು ಹೆಚ್ಚಿರುವುದರಿಂದ ಮತದಾರರಿಗೆ ಸನ್ ಸ್ಟ್ರೋಕ್ ತಪ್ಪಿಸಲು ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ವೈದ್ಯಕೀಯ ಕಿಟ್‍ನ ವ್ಯವಸ್ಥೆ ಮಾಡಲಾಗಿದೆ.ಮತದಾನ ಪ್ರಮಾಣ ಹೆಚ್ಚಿಸಿ: ಅನುಪಮಾ ಶಿವಮೊಗ್ಗ: ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಮತದಾರರ ಪಾತ್ರ ಪ್ರಮುಖವಾಗಿದ್ದು, ಮಂಗಳವಾರ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದು ಮಹಾನಗರ ಪಾಲಿಕೆಯ ಸ್ವೀಪ್ ನೋಡಲ್ ಅಧಿಕಾರಿ ಅನುಪಮಾ ಮನವಿ ಮಾಡಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಮತದಾನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ವಿಶೇಷ ಬೂತ್ ಗಳನ್ನು ಕೂಡ ತೆರೆಯಲಾಗಿದೆ. ಮಹಾನಗರ ಪಾಲಿಕೆ ಕೂಡ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಹಲವು ಸ್ಪರ್ಧೆಗಳು ಬೀದಿ ನಾಟಕ, ಯುವಕರಲ್ಲಿ ಜಾಗೃತಿ, ಕಾಲೇಜ್ ಆವರಣಗಳಲ್ಲಿ ಹೀಗೆ ಪ್ರಚಾರ ಮಾಡಿರುವುದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚುವ ನಿರೀಕ್ಷೆ ಇದೆ ಎಂದು ಹೇಳಿದರು.

ಮಧ್ಯಾಹ್ನವರೆಗೆ ಟೀ, ಕಾಫಿ ವ್ಯವಸ್ಥೆ:

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಕೆಲವು ಹೋಟೆಲ್ ಮಾಲೀಕರು ಕೂಡ ಮುಂದೆ ಬಂದಿದ್ದು, ಹೋಟೆಲ್ ಶುಭಂ ಮತ್ತು ಮಾಲ್ಗುಡಿ ಹೋಟೆಲ್ ನವರು ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಟೀ ಅಥವಾ ಕಾಫಿಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿವೆ. ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಚುನಾವಣೆ ಬಹುದೊಡ್ಡ ಅಸ್ತ್ರವಾಗಿದೆ. ಮುಖ್ಯವಾಗಿ ಯುವ ಜನಾಂಗ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನ ಮಾಡುವುದು ನಮ್ಮ ಕರ್ತವ್ಯ. ಮತ್ತು ಅದೊಂದು ಗರ್ವ. ಹಾಗಾಗಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಅನುಪಮಾ ಮನವಿ ಮಾಡಿದರು.