ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಾಳೆ ಮತದಾನ

| Published : Jun 02 2024, 01:45 AM IST

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಾಳೆ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಜಿಲ್ಲೆಯಲ್ಲಿ ಏಳು ಮತದಾನ ಕೇಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂನ್ 3ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೈ ವಾರ್ಷಿಕ ಚುನಾವಣೆ-2024ರ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾನ ಸಿದ್ಧತೆ ಕುರಿತು ಮಾಹಿತಿ ನೀಡಿದ ಅವರು ಅರ್ಹ ಶಿಕ್ಷಕರು ಮಾತ್ರ ಮತದಾರರಾಗಿ ಮತ ಚಲಾವಣೆ ಮಾಡಲಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ 3442 ಪುರುಷ ಹಾಗೂ 1471 ಮಹಿಳಾ ಶಿಕ್ಷಕ ಮತದಾರರು ಸೇರಿದಂತೆ ಒಟ್ಟು 4913 ಅರ್ಹ ಶಿಕ್ಷಕ ಮತದಾರರು ಇದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7 ಮತದಾನ ಕೇಂದ್ರಗಳಿವೆ. ಚಿತ್ರದುರ್ಗ ತಾಲೂಕಿನಲ್ಲಿ ಎರಡು ಮತಗಟ್ಟೆಗಳಿದ್ದು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕೊಠಡಿ ಸಂಖ್ಯೆ 1 ಹಾಗೂ ಕೊಠಡಿ ಸಂಖ್ಯೆ 2 ರಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊಳಕಾಲ್ಮುರು ಪಟ್ಟಣದ ತಾಲೂಕು ಆಡಳಿತ ಸೌಧ, ಚಳ್ಳಕೆರೆ ನಗರದ ಬಿಎಂಜಿಹೆಚ್‌ಎಸ್ ಶಾಲೆ, ಹಿರಿಯೂರು ನಗರದ ತಾಲೂಕು ಆಡಳಿತ ಸೌಧ, ಹೊಸದುರ್ಗ ಪಟ್ಟಣದ ತಾಲೂಕು ಕಚೇರಿ ಸಭಾಂಗಣ, ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತದಾನ ಕಾರ್ಯಕ್ಕಾಗಿ ಅರ್ಹ ಸಿಬ್ಬಂದಿ ನೇಮಕ ಮಾಡಿ ಈಗಾಗಲೇ ತರಬೇತಿ ನೀಡಲಾಗಿದೆ. ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ ಒಟ್ಟು 10 ಮತಗಟ್ಟೆ ಅಧ್ಯಕ್ಷಾಧಿಕಾರಿ, 10 ಮತಗಟ್ಟೆ ಸಹಾಯಕ ಅಧ್ಯಕ್ಷಾಧಿಕಾರಿ, 20 ಮತಗಟ್ಟೆ ಅಧಿಕಾರಿ, 10 ಮೈಕ್ರೋ ಅಬ್ಸವರ್ಸ್‌ಗಳನ್ನು ನೇಮಕಾತಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೂ ವೆಬ್‍ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಪ್ರಾಶಸ್ತ್ಯ ಮತದಾನ ಪದ್ಧತಿ ಇದಾಗಿದ್ದು, ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾರರಿಗೆ ಮತದಾರರ ಮಾಹಿತಿ ಪತ್ರಗಳು ಮತ್ತು ಮತದಾರರ ಚೀಟಿಗಳನ್ನು ವಿತರಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಹಾಗೂ ಕೆಲಸದ ಸಮಯದಲ್ಲಿ ಶೈಕ್ಷಣಿಕ ಸಂಸ್ಥೆ ಗಳಿಗೆ, ಕರ್ತವ್ಯ ಸ್ಥಳಗಳಿಗೆ ಭೇಟಿ ನೀಡಿ ವಿತರಿಸಲಾಗಿದೆ ಎಂದರು.ಮತದಾರರು ಗುರುತಿನ ಚೀಟಿ (ಎಪಿಕ್) ಹಾಜರುಪಡಿಸಲು ಸಾಧ್ಯವಾಗದಿದ್ದಲ್ಲಿ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಪಾಸ್‍ಪೋರ್ಟ್ ಸೇರಿದಂತೆ ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿರುತ್ತದೆ.

ಮತದಾರರು ಮತಗಟ್ಟೆಯೊಳಗೆ ಯಾವುದೇ ಪೆನ್ನು, ಕ್ಯಾಲ್ಕುಲೇಟರ್, ಅರಿತವಾದ ಆಯುಧಗಳು ಸೇರಿದಂತೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮತ ಚಲಾಯಿಸಲಿರುವ ಮತದಾರರಿಗೆ ಜೂನ್ 3ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಆದೇಶಿಸಲಾಗಿದೆ. ಮತದಾರರು ಮತ ಚಲಾಯಿಸಲು ಚುನಾವಣಾ ಆಯೋಗವು ಒದಗಿಸಿರುವ ಪೆನ್ನನ್ನು ಮಾತ್ರ ಬಳಸಲು ಅವಕಾಶವಿರುತ್ತದೆ ಎಂದು ಹೇಳಿದರು.ಜೂನ್ 3ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾದ ನಂತರ ಜಿಲ್ಲೆಯ 7 ಮತದಾನ ಕೇಂದ್ರಗಳಿಂದ ಬೂತ್‍ಗಳನ್ನು ಸಂಗ್ರಹ ಮಾಡಿ ಬೆಂಗಳೂರಿನಲ್ಲಿ ನಡೆಯುವ ಮತ ಎಣಿಕೆ ಕೇಂದ್ರಕ್ಕೆ ಕಳಿಸಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್‌ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಇದ್ದರು.

-----------ಕ್ಯಾಪ್ಸನ್‌: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.

---- 1 ಸಿಟಿಡಿ 1 ---