ವಚನಗಳು ಶರಣ-ಶರಣೆಯರ ಅನುಭಾವದ ನುಡಿ

| Published : Mar 25 2024, 12:47 AM IST

ಸಾರಾಂಶ

೩೬ಕ್ಕೂ ಹೆಚ್ಚು ಶಿವಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿದ್ದು, ಅವುಗಳ ಮೂಲಕ ಸತ್ಯ, ಅಹಿಂಸೆ, ನಿಸ್ವಾರ್ಥತೆ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಮೊದಲಾದ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ.

ಸಂಡೂರು: ವಚನಗಳು ಶರಣ-ಶರಣೆಯರ ಅನುಭಾವದ ನುಡಿಗಳು. ಸತ್ಯ, ಶುದ್ಧ ಕಾಯಕಕ್ಕೆ ಹೆಸರಾಗಿದ್ದ ಶರಣ-ಶರಣೆಯರಿಂದ ರಚಿತವಾದ ವಚನಗಳು ನಮ್ಮ ಬಾಳಿಗೆ ದಾರಿದೀಪಗಳಾಗಿವೆ ಎಂದು ಶಿಕ್ಷಕಿ ನಳಿನಾ ಪ್ರದೀಪ್‌ಕುಮಾರ್ ಅಭಿಪ್ರಾಯಪಟ್ಟರು.ತಾಲೂಕಿನ ಸುಶೀಲಾನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಮಹಾಮನೆ ಕಾರ್ಯಕ್ರಮ-೫೦, ದಿವಂಗತ ಕತ್ತಿ ಭರಮಪ್ಪನವರ ನುಡಿ ನಮನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣ ಸಾಹಿತ್ಯದಲ್ಲಿ ಶಿವಶರಣೆಯರ ಪಾತ್ರ’ ಕುರಿತು ಅವರು ಉಪನ್ಯಾಸ ನೀಡಿದರು.೧೨ನೇ ಶತಮಾನದಲ್ಲಿ ಅಕ್ಕಮಹಾದೇವಿ, ಸತ್ಯಕ್ಕ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ದುಗ್ಗಳೆ, ಗುಗ್ಗವ್ವೆ, ಕಾಳವ್ವೆ, ಗಂಗಾಂಬಿಕೆ, ನೀಲಾಂಬಿಕೆ ಮೊದಲಾದ ಸುಮಾರು ೩೬ಕ್ಕೂ ಹೆಚ್ಚು ಶಿವಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿದ್ದು, ಅವುಗಳ ಮೂಲಕ ಸತ್ಯ, ಅಹಿಂಸೆ, ನಿಸ್ವಾರ್ಥತೆ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆ ಮೊದಲಾದ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ ಎಂದರು.ತಮ್ಮ ವಚನಗಳಂತೆ ಬದುಕಿದ ಅವರು ವಚನ ಸಾಹಿತ್ಯ ಲೋಕದ ದ್ರುವ ತಾರೆಗಳಂತೆ ಇಂದಿಗೂ ಜೀವಂತವಾಗಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ನಾವು ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳಬೇಕಿದೆ ಎಂದರು.ಅರಳಿ ಕುಮಾರಸ್ವಾಮಿಯವರು ತಮ್ಮ ನುಡಿ ನಮನದಲ್ಲಿ ‘ಕತ್ತಿ ಭರಮಪ್ಪ’ ನವರ ಸಮಾಜ ಮುಖಿ ಚಿಂತನೆಗಳ ಕುರಿತು ವಿವರಿಸಿದರು.ಅಧ್ಯಕ್ಷತೆಯನ್ನು ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಅವರು ಮಾತನಾಡಿ, ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಬಸವ ತತ್ವ ಹಾಗೂ ವಚನ ತತ್ವಗಳನ್ನು ಪ್ರಸಾರ ಮಾಡಲಾಗುತ್ತಿದೆ. ಸುಶೀಲಾನಗರದ ದಿವಂಗತ ಕತ್ತಿ ಭರಮಪ್ಪನವರ ಸಾಮಾಜಿಕ ಹಾಗೂ ಧಾರ್ಮಿಕ ಪ್ರಜ್ಞೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ವಚನಕಾರರ ಆಶಯಗಳಂತೆ ಎಲ್ಲರೂ ಸಮಾಜಕ್ಕೆ ಉಪಕಾರಿಗಳಾಗಿ ಜೀವಿಸಬೇಕು ಎಂದರು.ಟಿ.ವೆಂಕಟೇಶ್, ಎಚ್.ಕುಮಾರಸ್ವಾಮಿ, ಜಿ.ಪಿ. ಪ್ರಣವ ಸ್ವರೂಪಿ ಹಾಗೂ ಜಿ.ಪಿ. ಪ್ರಣಾಮ್ ತೇಜಸ್ವಿ ಇವರು ಸಂಗೀತ ಸೇವೆಯನ್ನು ಸಲ್ಲಿಸಿದರು.ಜಿ.ವಿರೇಶ್ ಕಾರ್ಯಕ್ರಮ ನಿರ್ವಹಿಸಿದರು. ಎ.ಎಂ. ಶಿವಮೂರ್ತಿಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಜಿ.ನೀಲಾಂಬಿಕೆ ವಂದಿಸಿದರು. ಗ್ರಾಮದ ಮುಖಂಡರಾದ ಕೆ.ನಾಗರಾಜ, ಮಂಜುನಾಥ, ಆರ್.ಚೆನ್ನವೀರ, ಈ.ಮನೋಹರ ಗ್ರಾಮಸ್ಥರು ಉಪಸ್ಥಿತರಿದ್ದರು.