ಸಾರಾಂಶ
ಶಾಸಕ ಎನ್.ಶ್ರೀನಿವಾಸ್ ಮೊದಲ ಬಾರಿ ಗೆದ್ದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಬಹಳ ಮುಂದೆ ಇದ್ದಾರೆ. ಟೀಕೆ ಮಾಡುವವರು ಮಾಡಲಿ, ನೀನು ಕ್ಷೇತ್ರವನ್ನು ಅಭಿವೃದ್ಧಿ ಮಾಡುವಂತೆ ತಿಳಿಸಿದ್ದು, ನಾನು ಹಾಗೂ ಮುನಿಯಪ್ಪ ಇಬ್ಬರೂ ಸೇರಿ ಶಾಸಕರಿಗೆ ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತೇವೆ.
ದಾಬಸ್‍ಪೇಟೆ/ನೆಲಮಂಗಲ : ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲಿಸುವ ಮೂಲಕ ಸುಭದ್ರ ಸರ್ಕಾರ ನಡೆಸಲು ಅವಕಾಶ ಮಾಡಿಕೊಟ್ಟ ರಾಜ್ಯದ ಜನತೆಯ ಋಣವನ್ನು ಕಾಂಗ್ರೆಸ್ ಸರ್ಕಾರ ತೀರಿಸುವ ಕೆಲಸ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನೆಲಮಂಗಲ ತಾಲೂಕಿನ ಕಣೇಗೌಡನಹಳ್ಳಿ ಕೆರೆಯಲ್ಲಿ ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 243 ಟಿ.ಎಂ.ಸಿ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 70 ಕೆರೆಗಳಿಗೆ ತುಂಬಿಸುವ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ಷೇತ್ರದಲ್ಲಿನ ಜನತೆ ನಮ್ಮ ಪಕ್ಷದ ಅಭಿವೃದ್ಧಿಪರ ಸದಾ ಯೋಚಿಸುವ ಯುವ ಶಾಸಕನನ್ನು ಗೆಲ್ಲಿಸಿ ನಮಗೆ ಧೈರ್ಯ ತುಂಬಿದ್ದೀರಿ, ನಿಮ್ಮ ಋಣವನ್ನು ತೀರಿಸಲು ಇಂದು ಬಂದಿದ್ದೇನೆ. ವೃಷಭಾವತಿ ನೀರನ್ನು ಬಹಳ ಹಿಂದೆಯೇ ಸಂಸ್ಕರಣ ಮಾಡಿ ಹರಿಯಲು ಬಿಡಬೇಕು ಎಂದು ಅಂದುಕೊಂಡಿದ್ದೇವು. ರೈತರ ಉಳಿವಿಗಾಗಿ ಅವರ ಅನುಕೂಲಕ್ಕಾಗಿ ಸರ್ಕಾರ ಯೋಜನೆಯನ್ನು ರೂಪಿಸಿದೆ. ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ವೃಷಭಾವತಿ ಯೋಜನೆಯು 1900 ಕೋಟಿ ರು.ಗಳ ಯೋಜನೆಯಾಗಿದ್ದು, 148 ಟ್ಯಾಂಕ್ ಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ ಎಂದರು.
ಎತ್ತಿನಹೊಳೆ ಹಾಗೂ ಮಹದಾಯಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥ:
ಎತ್ತಿನಹೊಳೆ ಯೋಜನೆಗೆ ಹಾಸನ ಭಾಗದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಸಮಸ್ಯೆ ಆಗಿತ್ತು, ಈ ಬಗ್ಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಆದಷ್ಟು ಶೀಘ್ರವಾಗಿ ಎತ್ತಿನಹೊಳೆ ಹಾಗೂ ಮಹಾದಾಯಿ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಈ ಭಾಗಕ್ಕೆ ಎತ್ತಿನಹೊಳೆಯ ನೀರು ತರಲಾಗುವುದು. ಎತ್ತಿನಹೊಳೆಯ 16 ಟಿಎಂಸಿ ನೀರನ್ನು ಕುಡಿಯಲು, ಉಳಿದ ನೀರನ್ನು ಕೆರೆಗಳಿಗೆ ಹರಿಸಲಾಗುತ್ತದೆ ಎಂದರು.
ಶಾಸಕರಿಗೆ ಎರಡು ಕಣ್ಣುಗಳಾಗಿ ಕೆಲಸ:
ಶಾಸಕ ಎನ್.ಶ್ರೀನಿವಾಸ್ ಮೊದಲ ಬಾರಿ ಗೆದ್ದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಬಹಳ ಮುಂದೆ ಇದ್ದಾರೆ. ಟೀಕೆ ಮಾಡುವವರು ಮಾಡಲಿ, ನೀನು ಕ್ಷೇತ್ರವನ್ನು ಅಭಿವೃದ್ಧಿ ಮಾಡುವಂತೆ ತಿಳಿಸಿದ್ದು, ನಾನು ಹಾಗೂ ಮುನಿಯಪ್ಪ ಇಬ್ಬರೂ ಸೇರಿ ಶಾಸಕರಿಗೆ ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತೇವೆ. ಇಡೀ ಸರ್ಕಾರವೇ ಶಾಸಕರ ಜೊತೆ ಇರಲಿದೆ ಎಂದರು.
ಡಿಪಿಆರ್ ಶೀಘ್ರದಲ್ಲೇ ಸಿದ್ಧ:
ಆಹಾರ ನಾಗರಿಕ ಪೂರೈಕೆ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿ, ಬಯಲು ಸೀಮೆ ಪ್ರದೇಶಗಳಲ್ಲಿ ನೀರಿನ ಕೊರತೆ ನೀಗಿಸಲು ನಾನು ಕೇಂದ್ರದಲ್ಲಿ ಸಂಸತ್ ಸದಸ್ಯ ಆಗಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಯೋಜನೆ ರೂಪಿಸಿ ಕೆ.ಸಿ.ವ್ಯಾಲಿ, ಎಚ್.ಎನ್ ವ್ಯಾಲಿ ಯೋಜನೆ ಜಾರಿಗೆ ತರಲಾಯಿತು. ವೃಷಭಾವತಿ ನೀರು ದೇವನಹಳ್ಳಿ, ದೊಡ್ಡಬಳ್ಳಾಪುರ ಭಾಗಕ್ಕೆ ಕೂಡ ಆದಷ್ಟು ಬೇಗ ಬರಲು ಡಿಪಿಆರ್ ಸಿದ್ಧಪಡಿಸಿ ಪ್ರಸಕ್ತ ಸಾಲಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಿ;
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮಾಧುಸ್ವಾಮಿ, ಶಾಸಕ ಎಸ್.ಆರ್.ವಿಶ್ವನಾಥ್, ವಿಶ್ವಸಂಸ್ಥೆಯ ಯುನಿಟೈಡ್ ನ ಅಧ್ಯಕ್ಷರು, ಕೇಂದ್ರ ಸರ್ಕಾರದ ನೀರಾವರಿ ಇಲಾಖೆ ಕಾರ್ಯದರ್ಶಿ ಭೇಟಿ ನೀಡಿ ಕರ್ನಾಟಕದ ಮಾದರಿ ಯೋಜನೆ ಎಂದು ಹೇಳಿದೆ. ಆದರೆ ಸ್ಥಳೀಯ ಬಿಜೆಪಿ ಪುಡಾರಿಗಳು ರೈತರ ಹೆಸರೇಳಿಕೊಂಡು ನೀರಿನಲ್ಲಿ ರಾಜಕೀಯ ಮಾಡುವವರಿದ್ದಾರೆ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಿ ಎಂದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಹೇಳಿದ ಮಾತಿನಂತೆ ತಾಲೂಕಿನ 69 ಕೆರೆಗಳಿಗೆ ವೃಷಭಾವತಿ ನೀರನ್ನು ತುಂಬಿಸುವ ಕಾರ್ಯಕ್ಕೆ ಇಂದು ನಮ್ಮ ಡಿಸಿಎಂ ಹಾಗೂ ಸಚಿವರು ಚಾಲನೆ ನೀಡಿದ್ದಾರೆ. ಯಾರು ಎಷ್ಟೇ ಟೀಕೆಗಳನ್ನು ಮಾಡಿದರೂ ನಮ್ಮ ಸರ್ಕಾರ ರೈತರ ಪರವಿದ್ದು, ಸಂಸ್ಕರಿಸಿದ ನೀರು ಕೆರೆಗಳಿಗೆ ಹರಿಯಲಿದೆ. ಇದರಿಂದ ಯಾವುದೇ ಅಪಾಯವಿಲ್ಲ, ರೈತರು ಆತಂಕಪಡಬೇಕಾಗಿಲ್ಲ. ಕ್ಷೇತ್ರದ ಸೇವಕನಾಗಿ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಅದ್ದೂರಿ ಸ್ವಾಗತ: ಕಾರ್ಯಕ್ರಮಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕ ಎನ್.ಶ್ರೀನಿವಾಸ್ ಹಾಗೂ ಮುಖಂಡರು ಅರಿಶಿನಕುಂಟೆ ಟೋಲ್ ನಿಂದ ಬೈಕ್ ರ್‍ಯಾಲಿ ಮೂಲಕ ಸ್ವಾಗತಿಸಿದರು. ವೀರಗಾಸೆ, ಬೊಂಬೆಗಳ ಕುಣಿತ ಸೇರಿದಂತೆ ಬೃಹತ್ ಸೇಬಿನ ಹಾರವನ್ನು ಹಾಕುವ ಮೂಲಕ ಕಾರ್ಯಕ್ರಮದ ವೇದಿಕೆಗೆ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಉಷಾ ನಾರಾಯಣಸ್ವಾಮಿ, ಎನ್ ಡಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್, ನಗರಸಭೆ ಅಧ್ಯಕ್ಷ ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯ ಪ್ರದೀಪ್ ಕುಮಾರ್, ಪೂರ್ಣಿಮಾ, ಪುರುಷೋತ್ತಮ್, ಗಂಗಾಧರ್, ಲೋಲಾಕ್ಷಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜು, ಜಗದೀಶ್, ರಂಗಸ್ವಾಮಿ, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಎಂ.ಕೆ.ನಾಗರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.