ವಿಶ್ವಗುರು ಬಸವಣ್ಣನ ಸಮಕಾಲೀನ ನುಲಿಯ ಚಂದಯ್ಯ: ವೃಷಭೇಂದ್ರ ಶ್ರೀ

| Published : Aug 10 2025, 01:30 AM IST

ಸಾರಾಂಶ

ಕಡೂರು, ಜಾತಿ, ಧರ್ಮದ ಎಲ್ಲೆ ಮೀರಿ ಜಗತ್ತಿಗೆ ಸಮಾನತೆ ಪ್ರಾಮುಖ್ಯತೆ ಸಾರಿದ ವಿಶ್ವಗುರು ಬಸವಣ್ಣನವರ ಸಮಕಾಲೀನರಾಗಿ ನುಲಿಯ ಚಂದಯ್ಯನವರು ಎಲ್ಲರಿಗೂ ದಾರಿ ದೀಪ ಎಂದು ನಂದಿ ಹೊಸಹಳ್ಳಿ ಮಠದ ಶ್ರೀ ವೃಷಭೇಂದ್ರ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಶಿವಶರಣ ಶ್ರೀ ನುಲಿಯಚಂದಯ್ಯ ಅವರ 918 ನೇ ಜಯಂತಿ ಸಾನ್ನಿಧ್ಯ

ಕನ್ನಡಪ್ರಭ ವಾರ್ತೆ, ಕಡೂರು

ಜಾತಿ, ಧರ್ಮದ ಎಲ್ಲೆ ಮೀರಿ ಜಗತ್ತಿಗೆ ಸಮಾನತೆ ಪ್ರಾಮುಖ್ಯತೆ ಸಾರಿದ ವಿಶ್ವಗುರು ಬಸವಣ್ಣನವರ ಸಮಕಾಲೀನರಾಗಿ ನುಲಿಯ ಚಂದಯ್ಯನವರು ಎಲ್ಲರಿಗೂ ದಾರಿ ದೀಪ ಎಂದು ನಂದಿ ಹೊಸಹಳ್ಳಿ ಮಠದ ಶ್ರೀ ವೃಷಭೇಂದ್ರ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ಕಡೂರಿನ ತಾಲೂಕು ಕಚೇರಿ ಆ‍ವರಣದಲ್ಲಿ ನಡೆದ ಶಿವಶರಣ ಶ್ರೀ ನುಲಿಯಚಂದಯ್ಯ ಅವರ 918 ನೇ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ವಿಶ್ವಗುರು ಬಸವಣ್ಣನವರ ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ ಸಾರಿದ ಅವರ ಸಮಕಾಲೀನರಾಗಿ ನುಲಿಯ ಚಂದಯ್ಯನವರು ಇಂದಿಗೂ ಎಲ್ಲರಿಗೂ ದಾರಿ ದೀಪವಾಗಿದ್ದಾರೆ. ಸಮಾಜದ ಜನರು ಅಧಿಕಾರ ಕ್ಕಾಗಿ ಹಪ ಹಪಿಸದೆ ಸಿಕ್ಕ ಅವಕಾಶ ಬಳಸಿಕೊಂಡು ಬಡವರು ಹಿಂದುಳಿದವರ ಏಳಿಗೆಗೆ ದುಡಿದರೆ ನುಲಿಯಚಂದಯ್ಯ ಅವರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದರು.

ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ಕೆಲವೇ ವಚನ ರಚಿಸಿದರೂ ನುಲಿಯಚಂದಯ್ಯ ಇಂದಿಗೂ ಪ್ರಸ್ತುತವಾಗಿ ಉಳಿದಿದ್ದಾರೆಂದರೆ ಅವರ ಆದರ್ಶವೇ ಕಾರಣ. ಅವರಂತೆ ಕಾಯಕ ಮತ್ತು ವಿದ್ಯಾ ದಾಸೋಹ ಇಂದಿನ ಪೀಳಿಗೆಗೆ ದಾರಿ ದೀಪದಂತಿದೆ. ಅವರ ಆದರ್ಶ ಪಾಲಿಸಿ ನಡೆದರೆ ಅವರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕ ಆಗುತ್ತದೆ ಎಂದರು. ಕುಳುವ ಸಮಾಜದ ತಾಲೂಕು ಅಧ್ಯಕ್ಷ ಎ.ಜಿ.ಗಿರೀಶ್ ಮಾತನಾಡಿ, ಬಸವಣ್ಣನವರ ವ್ಯಕ್ತಿತ್ವ, ಆದರ್ಶಕ್ಕೆ ಮಾರುಹೋಗಿ ಅನುಭವ ಮಂಟಪದಲ್ಲಿದ್ದ ಅನೇಕ ಶರಣರಲ್ಲಿ ನುಲಿಯ ಚಂದಯ್ಯನವರು ಪ್ರಮುಖರು. ಕಾಯಕ ನಿಷ್ಠೆಗಿಂತ ಬೇರೊಂದಿಲ್ಲ, ಕಾಯಕ ಮುಂದೆ ದೇವನೂ ತೃಣ ಎಂದು ಸಾರಿ ಶಿವನನ್ನೂ ಕಾಯಕದಲ್ಲಿ ತೊಡಗಿಸಿದ ಕೀರ್ತಿ ಚಂದಯ್ಯ ಕಾಯಕವೆಂದರೆ ಸಮಾಜ ತಿದ್ದುವ ಕಾಯಕವೇ ಶ್ರೇಷ್ಠ ಎಂದು ಸಾರಿದ ಅವರ ದಾರಿಯಲ್ಲಿ ನಾವು ನಡೆಯೋಣ ಎಂದರು.

ಜ್ಯೋತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷ ಟಿ.ಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್, ಅಲೆಮಾರಿ ಅಭಿವೃದ್ಧಿ ನಿಗಮದ ಅನುಷ್ಠಾನ ಸಮಿತಿ ಸದಸ್ಯ ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಮತ್ತು ಮಂಜುನಾಥ್, ಯಗಟಿ ವಿಶ್ವನಾಥ್, ಕೆ.ವಿ. ಮಂಜುನಾಥ್ ಮತ್ತು ಸಮಾಜದ ಮುಖಂಡ ಶ್ರೀನಿವಾಸ್, ರಮೇಶ್, ಅಣ್ಣಯ್ಯ, ದೇವರಾಜು, ಧರಣಿಕುಮಾರ್, ತಾಲೂಕು ಆಡಳಿತದ ಅಧಿಕಾರಿ ಸಿಬ್ಬಂದಿ ಇದ್ದರು.

9ಕೆಕೆಡಿಯು2.

ಕಡೂರು ಪಟ್ಟಣದ ತಾಲೂಕು ಕಚೇರಿ ಆ‍ವರಣದಲ್ಲಿ ಶಿವಶರಣ ಶ್ರೀ ನುಲಿಯಚಂದಯ್ಯ ಅವರ 918 ನೇ ಜಯಂತಿ ಆಚರಣೆ ನಡೆಯಿತು.