ಸಾರಾಂಶ
ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿವಿಯ ಯಡವಟ್ಟುಗಳು ಒಂದೆರಡಲ್ಲ, ಈ ವಿವಿ ವ್ಯಾಪ್ತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಗೋಳು ಹೇಳತೀರದು. ಪರೀಕ್ಷೆ ಬರೆದು ಒಂದುವರೆ ವರ್ಷವಾದರೂ ಬಂದಿರುವ ಅಂಕಗಳ ಎಷ್ಟು ಎನ್ನುವ ಮಾಹಿತಿಯೇ ಇಲ್ಲ. ಹೀಗೆ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಕನ್ನಡಪ್ರಭ ಮಾಡಲಿದೆ. ಈ ಹಿನ್ನೆಲೆ ಇಂದಿನಿಂದ ಸರಣಿ ಲೇಖನ ಪ್ರಕಟಿಸಲಿದೆ. ಅದರ ಮೊದಲ ಭಾಗ ಇಲ್ಲಿದೆ.
ಭಾಗ-1ಅಂಕಪಟ್ಟಿಯಲ್ಲಿ ದಾಖಲಾಗದ ಪಡೆದ ಅಂಕಗಳು
ಬಿಇಡಿ, ಎಂಎ ಪ್ರವೇಶಕ್ಕೂ ಅಡ್ಡಿಕೇಳಿ ಪತ್ರ ಬರೆದರೂ ಸ್ಪಂದಿಸುತ್ತಿಲ್ಲವಂತೆ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ನಾವು ಪಾಸಾಗಿದ್ದೇವೆ. ಆದರೆ, ನಮಗೆ ಎಷ್ಟು ಮಾರ್ಕ್ಸ್ ಬಂದಿದೆ? ಅಂಕಪಟ್ಟಿಯಲ್ಲಿ ಕೇವಲ ಪಾಸ್ ಎಂದು ಮಾತ್ರ ನಮೂದಿಸಿದರೆ ನಾವು ಮುಂದಿನ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದಾದರೂ ಹೇಗೆ? ನಮ್ಮ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬೇಡಿ. ನಮಗೆ ಬಂದಿರುವ ಅಂಕಗಳ ಸಮೇತ ನಮ್ಮ ಫಲಿತಾಂಶ ಪ್ರಕಟ ಮಾಡಿ.ಇದು, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಗೋಳು.
ಹೌದು, ಬಿಎ, ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳ 3ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದ್ದರೂ ಸಹ ಅಂಕಗಳನ್ನು ಪ್ರಕಟ ಮಾಡದೆ ಇರುವುದು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.2023ರ ಮಾರ್ಚ್, ಏಪ್ರಿಲ್‌ನಲ್ಲಿ 3ನೇ ಸೆಮ್ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು ಈಗ 6ನೇ ಸೆಮಿಸ್ಟರ್ ಪೂರ್ಣಗೊಳಿಸುತ್ತಾ ಬಂದಿದ್ದರೂ ಫಲಿತಾಂಶವನ್ನು ಪೂರ್ಣ ಪ್ರಮಾಣದಲ್ಲಿ ಪ್ರಕಟ ಮಾಡಿಲ್ಲ. ಕಾಲೇಜಿನವರನ್ನು ಕೇಳಿದರೂ ಕೇರ್ ಮಾಡುತ್ತಿಲ್ಲ. ಇದು ವಿವಿಯವರು ಮಾಡಬೇಕು ಎಂದು ಹೇಳಿ ಕೈ ಚೆಲ್ಲಿದ್ದಾರೆ.
ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿ ಬಳ್ಳಾರಿ ವಿಎಸ್‌ಕೆ ವಿವಿಯ ವ್ಯಾಪ್ತಿಯ ಎಲ್ಲ ಕಾಲೇಜು ವಿದ್ಯಾರ್ಥಿಗಳ ಗೋಳು ಇದು. ತಾಂತ್ರಿಕ ಸಮಸ್ಯೆಯಿಂದಾಗಿ 3ನೇ ಸೆಮಿಸ್ಟರ್ ಫಲಿತಾಂಶವನ್ನು ಸರಿಯಾಗಿ ಪ್ರಕಟಿಸುತ್ತಿಲ್ಲ. ಅಂಕಪಟ್ಟಿಯಲ್ಲಿಯೂ ಕೇವಲ ಪಾಸ್ ಎಂದು ಮಾತ್ರ ನಮೂದಿಸಲಾಗುತ್ತಿದೆಯೇ ಹೊರತು ಪಡೆದಿರುವ ಅಂಕ ನಮೂದಿಸಿಲ್ಲ.ಭವಿಷ್ಯಕ್ಕೆ ಕುತ್ತು:
ವಿದ್ಯಾರ್ಥಿಗಳು ಈಗ ಸ್ನಾತಕೋತ್ತರ ಪ್ರವೇಶ ಪಡೆಯಲು, ವಿಶೇಷವಾಗಿ ಬಿಇಡಿ ಕೋರ್ಸ್ ಸೇರಲು ಅರ್ಜಿ ಹಾಕಲು ಅಂಕಗಳು ಬೇಕೇಬೇಕು. ಆದರೆ, 3ನೇ ಸೆಮಿಸ್ಟರ್ ಫಲಿತಾಂಶ ಗೊಂದಲದಿಂದಾಗಿ ಸಮಸ್ಯೆಯಾಗಿದೆ.ನೂರಾರು ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಈಗ ಪದವಿ ಪೂರ್ಣಗೊಳಿಸುವ ಕೊನೆಯ ದಿನಗಳಲ್ಲಿ ಇರುವವರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಇದನ್ನು ಸರಿ ಮಾಡುವುದಕ್ಕೆ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇಲ್ಲ.
ವಿದ್ಯಾರ್ಥಿಗಳಿಂದ ಪತ್ರ:ಈ ಕುರಿತು ವಿದ್ಯಾರ್ಥಿಗಳು ಬಳ್ಳಾರಿ ವಿಎಸ್ ಕೆ ವಿವಿ ಕುಲಪತಿಗಳಿಗೂ ಪತ್ರ ಬರೆದು ಕೋರಿಕೊಂಡಿದ್ದಾರೆ. ಆದರೆ ಅವರ್‍ಯಾರೂ ಸ್ಪಂದಿಸುತ್ತಲೇ ಇಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು ಬೀಳುವಂತೆ ಆಗಿದೆ. ಕಷ್ಟಪಟ್ಟು ಓದಿ, ಪಾಸಾಗಿ, ಪಡೆದಿರುವ ಅಂಕವನ್ನು ಅಂಕಪಟ್ಟಿಯಲ್ಲಿ ನಮೂದಿಸುವುದಕ್ಕಾಗಿ ವಿದ್ಯಾರ್ಥಿಗಳು ಹೆಣಗಾಡಬೇಕಾಗಿದೆ. ಇದೊಂದು ರೀತಿಯಲ್ಲಿ ಹೊಸ ಸಮಸ್ಯೆಯಾಗಿದೆ.
ಇದು ನಮ್ಮ ಮುಂದಿನ ಭವಿಷ್ಯಕ್ಕೆ ಕುತ್ತಾಗುತ್ತಿದೆ. ವಿವಿಯ ಅಧಿಕಾರಿಗಳು ಬೇಗನೆ ಸಮಸ್ಯೆ ಇತ್ಯರ್ಥ ಮಾಡಬೇಕು. ಇಲ್ಲದಿದ್ದರೆ ಆಗುವ ತೊಂದರೆಗೆ ವಿವಿಯೇ ಹೊಣೆಯಾಗುತ್ತದೆ ಎಂದೆಲ್ಲ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರೂ ವಿವಿ ಮಾತ್ರ ಗಾಢನಿದ್ರೆಯಲ್ಲಿರುವಂತೆ ಕಾಣುತ್ತದೆ.ಕೇಳಿದಾಗಲೆಲ್ಲ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳುತ್ತಿದ್ದಾರೆಯೇ ಹೊರತು, ತಾಂತ್ರಿಕ ಸಮಸ್ಯೆಯನ್ನು ಯಾರು ಇತ್ಯರ್ಥ ಮಾಡಬೇಕು ಎನ್ನುವುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.