VTU's 5G laboratory is the best in the state.

-ವಿಟಿಯು ನಿರ್ದೇಶಕಿ ಡಾ. ಶುಭಾಂಗಿ ಮಾಹಿತಿ । ದೇಶಾದ್ಯಂತ ಸ್ಥಾಪಿತ 100 ಲ್ಯಾಬ್‌ಗಳಲ್ಲೇ ಕಲಬುರಗಿ ವಿಟಿಯು ಉತ್ತಮ ಸಾಧನೆ

--

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯ ವರ್ತುಲ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ 3 ವರ್ಷಗಳ ಹಿಂದೆ ಆರಂಭವಾಗಿರುವ 5ಜಿ ಯೂಸ್ ಕೇಸ್ ಲ್ಯಾಬ್ (5G Use Case Lab) ಕರ್ನಾಟಕದಲ್ಲೇ ಅತ್ಯುತ್ತಮ ಪ್ರಯೋಗಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ''''''''100 5G ಲ್ಯಾಬ್ಸ್'''''''' ಉಪಕ್ರಮದ ಅಡಿಯಲ್ಲಿ ಈ ಪ್ರಯೋಗಾಲಯವನ್ನು 2023 ರಲ್ಲಿ ಕಲಬುರಗಿ ವಿಟಿಯು ಸೆಂಟರ್‌ನಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ದೇಶಾದ್ಯಂತ ಇಂತಹ 100ಲ್ಯಾಬ್‌ಗಳು ಸ್ಥಾಪಿಸಲಗಿತ್ತು, ಈ ಪೈಕಿ ಕಲಬುರಗಿ ವಿಟಿಯು 5ಜಿ ಲ್ಯಾಬ್‌ ಸೇರಿದಂತೆ ರಾಜ್ಯದಲ್ಲೇ ಬೆಂಗಳೂರಿನ ಐಐಎಸ್‌ಸಿ, ಬಿಎಂಎಸ್‌ ತಾಂತ್ರಿಕ ವಿದ್ಯಾಲಯ, ಎಂಎಸ್‌ ರಾಮಯ್ಯ ಇಂಜಿನಿಯರಿಂಗ್‌ ಕಾಲೇಜು, ಮಣಿಪಾಲದ ಎಂಐಟಿ ಸಂಸ್ಥೆ, ಸುರತ್ಕಲ್‌ನ ಎನ್‌ಐಟಿ, ತುಮಕೂರಿನ ಎಸ್‌ಐಟಿ ಕಾಲೇಜುಗಳಲ್ಲಿಯೂ 5ಜಿ ಲ್ಯಾಬ್‌ಗಳು ಆರಂಭವಾಗಿದ್ದವು.

ಸುದ್ದಿಗೋಷ್ಠಿಯಲ್ಲಿ ವಿಟಿಯು ವಿರ್ದೇಶಕಿ ಡಾ. ಶುಭಾಂಗಿ, ಬಸವರಾಜ ಗಾದಗೆ ಈ ಬಗ್ಗೆ ಮಾಹಿತಿ ನೀಡುತ್ತ ಈಚೆಗೆ ವಿಟಿಯು ಕುಲಪತಿ ವಿದ್ಯಾಶಂಕರ್‌ ಅವರಿಗೆ ರಾಜ್ಯ ದೂರಸಂಪರ್ಕ ಇಲಾಖೆಯ ಉಪ ಮಹಾ ನಿರ್ದೇಶಕ ಶ್ರೀನಿವಾಸ್‌ ಗಲಗಲಿ ಪತ್ರ ಬರೆದು ಕಲಬುರಗಿ ವಿಟಿಯುನಲ್ಲಿರುವ 5ಜಿ ಲ್ಯಾಬ್‌ ರಾಜ್ಯದಲ್ಲಿ ಸ್ಥಾಪಿಸಲಾಗಿರುವ 8 ಲ್ಯಾಬ್‌ಗಳಲ್ಲೇ ಅತ್ಯುತ್ತಮ ಲ್ಯಾಬ್‌ ಆಗಿದೆ. ದೇಶಾದ್ಯಂತಸ್ಥಾಪಿಸಲಾಗಿರುವ 100 ಲ್ಯಾಬ್‌ಗಳಲ್ಲೇ ಉತ್ತಮ ಸಾಧನೆ ಮಾಡಿರುವ ಮಾಹಿತಿ ನೀಡಿ ಶುಭಕೋರಿದ್ದಾರೆಂದರು.

ಸೆಪ್ಟೆಂಬರ್‌ 2026 ರ ವರೆಗಿನ ಮಾಸಿಕ ಗ್ರೇಡೇಷನ್‌ ಫ್ರೇಮ್‌ವರ್ಕ್‌ ಆಧಾರದ ಮೇಲೆ ಕಲಬುರಗಿಯ ಲ್ಯಾಬ್‌ 143 ಅಂಕ ಪಡೆದು ಎಕ್ಸಲಂಟ್‌ ಗ್ರೇಡ್‌ ಪಡೆದು ರಾಜ್ಯದಲ್ಲೇ ಮೊದಲ ಲ್ಯಾಬೋರೇಟರಿಯಾಗಿ ಸಾಧನೆ ಮಾಡಿದೆ ಎಂದು ಡಾ. ಶುಭಾಂಗಿ ಹೇಳಿದ್ದಾರೆ.

ವಿಟಿಯು ಕೇಂದ್ರಕ್ಕೆ ಈ 5ಜಿ ಲ್ಯಾಬ್‌ ಮಂಜೂರಾಗಲು ಕುಲಪತಿ ಡಾ. ವಿದ್ಯಾಶಂಕರ್‌, ಹಿಂದಿನ ನಿರ್ದೇಶಕ ಬಸವರಾಜ ಗಾದಗೆ ಕಾರಣ. ಅವರ ಸತತ ಪ್ರಯತ್ನದಿಂದ ಈ ಲ್ಯಾಬ್‌ ವಿಟಿಯುಗೆ ದೊರಕಿದ್ದು ಉತ್ತಮ ಸಾಧನೆ ತೋರಿದೆ.

ಮೇಘಾರಾಣಿ, ಡಾ. ಕಿರಣ, ಅಶ್ವಿನಿ, ಶಂಭುಲಿಂಗ, ಅಭಯ ಹಾಗೂ ಶರಿಯಾ 5ಜಿ ಲ್ಯಾಬ್‌ನ ಸಿಬ್ಬಂದಿ ಈಗಾಗಲೇ 4 ಪೇಟೆಂಟ್‌ ಆಗಿವೆ. ವಿದ್ಯಾರ್ಥಿಗಳು ಈ ಲ್ಯಾಬ್‌ ಬಳಸಿ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಬರೆಯುತ್ತಿದ್ದಾರೆಂದು ಡಾ. ಶುಭಾಂಗಿ, ಡಾ. ಗಾದಗೆ ಹೇಳಿದರು.

5ಜಿ ಲ್ಯಾಬ್‌ ಪ್ರಮುಖಾಂಶಗಳು:

• ಕರ್ನಾಟಕದ ಬೆರಳೆಣಿಕೆಯಷ್ಟು ಕೇಂದ್ರಗಳಲ್ಲಿ ಕಲಬುರಗಿ ವಿಟಿಯು ಕೇಂದ್ರವೂ ಸ್ಥಾನ ಪಡೆದಿದೆ.

• ಕೈಗಾರಿಕಾ ಇಂಟರ್‌ನೆಟ್‌ ಆಫ್ ಥಿಂಗ್ಸ್ , ಎಐ, ಆರೋಗ್ಯ, ಶಿಕ್ಷಣದ ನೈಜ 5ಜಿ ಅಪ್ಲಿಕೇಶನ್‌ ಮೂಲಸೌಕರ್ಯ.

• ಸಂಶೋಧಕರಿಗೆ, ನವೋದ್ಯಮಗಳಿಗೆ ಜಾಗತಿಕ ಮಟ್ಟದ ತಂತ್ರಜ್ಞಾನ ತರಬೇತಿ, 6ಜಿ ತಂತ್ರಜ್ಞಾನಕ್ಕೆ ಸಜ್ಜಾಗಲು ಅತ್ಯುತ್ತಮ ವೇದಿಕೆ.

- ಕೃಷಿ: ಸ್ಮಾರ್ಟ್ ಕೃಷಿ, ಡ್ರೋನ್ ತಂತ್ರಜ್ಞಾನದ ಪ್ರಯೋಗಗಳಿಗೆ ವೇದಿಕೆ

- ಹಳ್ಳಿಗಳಿಗೂ ತಲುಪುವ ರೋಗನಿರ್ಣಯ, ಟೆಲಿ-ಮೆಡಿಸಿನ್ ತಂತ್ರಜ್ಞಾನ

-------------

ವಿದ್ಯಾರ್ಥಿಗಳಿಗೆ ಅನುಕೂಲ:

ಈ ಪ್ರಯೋಗಾಲಯ ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜತೆ ಪ್ರಾದೇಶಿಕ ಮಟ್ಟದಲ್ಲಿ ತಾಂತ್ರಿಕ ಕ್ರಾಂತಿಗೆ ಭದ್ರ ಬುನಾದಿ ಹಾಕಿದೆ. ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಇಂಜಿನಿಯರಿಂಗ್‌ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು ಈ ಪ್ರಯೋಗಾಲಯದ ಲಾಭ ಪಡೆಯಲು ವ್ಯವಸ್ಥೆ ಇಲ್ಲಿದ್ದು, ಈಗಾಗಲೇ 200 ಮಕ್ಕಳು ಲಾಭ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಮತ್ತು ಸ್ವಂತ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ಇದು ರನ್‌ವೇ ಆಗಿ ಕೆಲಸ ಮಾಡುತ್ತಿದೆ ಎಂದು ಡಾ. ಶುಭಾಂಗಿ, ಡಾ. ಬಸವರಾಜ ಗಾದಗೆ ಹೇಳಿದರು.

ಫೋಟೋ- ಲ್ಯಾಬ್‌ 1

ಕಲಬುರಗಿ ವಿಟಿಯು 5ಜಿ ಲ್ಯಾಬ್‌ನಲ್ಲಿರುವ ಡ್ರೋನ್‌ ತಂತ್ರಜ್ಞಾನ

--

ಫೋಟೋ- ಲ್ಯಾಬ್‌ 2 ಮತ್ತು ಲ್ಯಾಬ್‌ 3

ಕಲಬುರಗಿಯ ವಿಟಿಯು ಕ್ಯಾಂಪಸ್‌ನಲ್ಲಿರುವ 5ಜಿ ಯೂಸ್‌ ಕೇಸ್‌ ಲ್ಯಾಬೋರೇಟರಿಯಲ್ಲಿನ ಯಂತ್ರೋಪಕರಣ, ಸೌಲಭ್ಯಗಳನ್ನು ವಿವರಿಸಿದ ಡಾ. ಶುಭಾಂಗಿ, ಡಾ. ಬಸವರಾಜ ಗಾದಗೆ ಹಾಗೂ ಸಿಬ್ಬಂದಿ ವರ್ಗ.