ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಚಳ್ಳಕೆರೆ ತಾಲೂಕಿನಂತಹ ಬರಡು ನೆಲದಲ್ಲಿ ಸದಾ ನೀರಾವರಿ ಪ್ರದೇಶದಲ್ಲಿ ಬೆಳೆಯುವ ಅಡಿಕೆ ಬೆಳೆ ಬೆಳೆಯುವ ಕನಸನ್ನು ಯಾರೂ ಕಂಡಿರಲಿಲ್ಲ. ಆದರೆ, ದೇವರ ಕೃಪೆಯಿಂದ ಇಂದು ಈ ಭಾಗಕ್ಕೆ ವಿವಿ ಸಾಗರದ ಮೂಲಕ ನೀರನ್ನು ಹರಿಸುತ್ತಿದ್ದು, ಇದರಿಂದ ಈ ಭಾಗದಲ್ಲೂ ಅಡಿಕೆ ಬೆಳೆಯುವ ರೈತರ ಕನಸು ನನಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಅವರು, ಮಂಗಳವಾರ ತಾಲೂಕಿನ ಪರಶುರಾಮಪುರ ಹೋಬಳಿ ಚೌಳೂರು ಗೇಟ್‌ನ ಅಲೀಪೀರ್ ಮಠದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರ, ಬಬ್ಬೂರು ಕೃಷಿ ತಂತ್ರಜ್ಞರ ಸಂಸ್ಥೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಡಿಕೆ ಬೇಸಾಯ ಮತ್ತು ಅಂತರ್ ಬೆಳೆಗಳ ಕುರಿತ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ನಿರೀಕ್ಷೆಗೂ ಮೀರಿ ಕಡಿಮೆಯಾಗಿದೆ. ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುವ ಪ್ರಯತ್ನ ಮುಂದುವರೆದಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ನೀರು ಬೇಗ ಹರಿಸಿದಷ್ಟು ಈ ಭಾಗದ ಅಡಿಕೆ ಬೆಳೆಯುವ ರೈತರಿಗೆ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ. ಮಾರ್ಚ್ ಅಂತ್ಯಕ್ಕೆ ವೇದಾವತಿ ನದಿಗೆ ನೀರು ಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ವಿರೂಪಾಕ್ಷಪ್ಪ, ಪ್ರಸ್ತುತ ತಾಲೂಕಿನಾದ್ಯಂತ ೪೩ ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಬೇಸಿಗೆ ಬಿಸಿಲಿಗೆ ಅಡಿಕೆ ಬೆಳೆಗೆ ಯಾವುದೇ ರೋಗ ವ್ಯಾಪಿಸುವುದು ಸಾಧ್ಯವಿಲ್ಲ. ಆದ್ದರಿಂದ ಎಲ್ಲೆಡೆ ಅಡಿಕೆ ಗಿಡಗಳು ದಷ್ಟಪುಷ್ಠ ಸದೃಢವಾಗಿ ಬೆಳೆದಿವೆ. ಆದರೆ, ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆಗೆ ನೀರಿನ ಅವಶ್ಯಕತೆ ಇದೆ. ನೀರು ಬೇಗ ಹರಿಸಿದಷ್ಟು ಅಡಿಕೆ ಗಿಡಗಳಲ್ಲಿ ಶಕ್ತಿ ಹೆಚ್ಚುತ್ತದೆ. ರೈತರು ಅಡಿಕೆ ಬೆಳೆಯನ್ನು ಬೆಳೆಯಲು ಹೆಚ್ಚು ಆಸಕ್ತಿ ತೋರಬೇಕು ಎಂದರು.
ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ರೈತ ಸಂಘದ ಉಪಾಧ್ಯಕ್ಷರಾದ ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ.ಭೂತಯ್ಯ, ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷಸೋಮಗುದ್ದುರಂಗಸ್ವಾಮಿ, ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಶ್ರೀಕಂಠಮೂರ್ತಿ ಮುಂತಾದವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಕಾವ್ಯ ವಿಜಯಕುಮಾರ್ ವಹಿಸಿದ್ದರು. ವಿಜ್ಞಾನಿಗಳಾದ ಡಾ.ಬಿ.ಸತ್ಯನಾರಾಯಣರೆಡ್ಡಿ, ಡಾ.ನಾಗರಾಜಪ್ಪಅಡಿವಪ್ಪರ್, ಡಾ.ಎಚ್.ಪಿ.ಸಂದೀಪ್, ಡಾ.ವೀರಭದ್ರರೆಡ್ಡಿ, ಬಿ.ಆರ್.ವೆಂಕಟೇಶ್‌ರೆಡ್ಡಿ, ಪಿಡಿಒ ಮಂಜಮ್ಮ, ರಾಘವೇಂದ್ರ ಮುಂತಾದವರಿದ್ದರು.