ಮುಗಿದ ಲೋಕ ಸಮರ ಫಲಿತಾಂಶಕ್ಕೆ ಕಾತುರ

| Published : Apr 29 2024, 01:30 AM IST

ಸಾರಾಂಶ

ಬರೋಬ್ಬರಿ ಒಂದೂವರೆ ತಿಂಗಳ ಚುನಾವಣಾ ಪ್ರಕ್ರಿಯೆಗೆ ಕಡೆಗೂ ಬ್ರೇಕ್ ಬಿದ್ದಿದ್ದು ಫಲಿತಾಂಶಕ್ಕಾಗಿ ಜೂನ್ 4 ರವರೆಗೆ ಕಾಯಬೇಕು.

ಉಗಮ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ ತುಮಕೂರುಬರೋಬ್ಬರಿ ಒಂದೂವರೆ ತಿಂಗಳ ಚುನಾವಣಾ ಪ್ರಕ್ರಿಯೆಗೆ ಕಡೆಗೂ ಬ್ರೇಕ್ ಬಿದ್ದಿದ್ದು ಫಲಿತಾಂಶಕ್ಕಾಗಿ ಜೂನ್ 4 ರವರೆಗೆ ಕಾಯಬೇಕು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ಕಾರಣಕ್ಕೋ ಏನೋ ಅಷ್ಟಾಗಿ ಸಭೆ ಸಮಾರಂಭಗಳು, ರಾಜಕೀಯ ಸಮಾವೇಶಗಳು ನಡೆಯಲಿಲ್ಲ. ಪ್ರತಿ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಸಭೆ ಮಾಡಿ ಮತದಾರರನ್ನು ಆಕರ್ಷಿಸಿದರು.ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿದ್ದರೆ ಈ ಬಾರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿತ್ತು. ಮೈತ್ರಿ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುದ್ದಹನುಮೇಗೌಡ ಸ್ಪರ್ಧಿಸಿದ್ದರು. ತುಮಕೂರು ನಗರ, ಗ್ರಾಮಾಂತರ, ಮಧುಗಿರಿ, ಕೊರಟಗೆರೆ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರವೇಕೆರೆ ಸೇರಿ 8 ವಿಧಾನಸಭಾ ಕ್ಷೇತ್ರದ ತುಮಕೂರು ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆಯಿತು.ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಹಲವಾರು ಸ್ಟಾರ್ ಕ್ಯಾಂಪೇನರ್‌ಗಳು ಜಿಲ್ಲೆಗೆ ಬಂದಿದ್ದರು. ಆದರೆ ಈ ಬಾರಿ ಕೊನೆಗಳಿಗೆಯಲ್ಲಿ ಅಮಿತ್ ಶಾ ಅವರ ಪ್ರವಾಸ ಕಾರ್ಯಕ್ರಮ ರದ್ದಾಯಿತು. ಇನ್ನು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಎರಡು ಬಾರಿ ಪ್ರಚಾರಕ್ಕೆ ಆಗಮಿಸಿದ್ದರು.ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೂ, ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಚೇರಿಗೆ ಹೋಗಿ ಒಗ್ಗಟ್ಟು ಪ್ರದರ್ಶಿಸಿದ್ದರು. ಕಳೆದ ಬಾರಿ ಕಾಂಗ್ರೆಸ್‌ನಿಂದ ಆಗ ಸಂಸದರಾಗಿದ್ದ ಮುದ್ದಹನುಮೇಗೌಡರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿದ್ದರಿಂದ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರೇ ತುಮಕೂರಿನಿಂದ ಸ್ಪರ್ಧಿಸಿದ್ದರಿಂದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿತು.ವರಿಷ್ಠರ ನಡೆಗೆ ಬೇಸರಗೊಂಡಿದ್ದ ಮುದ್ದಹನುಮೇಗೌಡರು ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಅಲ್ಲಿಯೂ ಟಿಕೆಟ್ ಸಿಗುವುದು ಅನುಮಾನವಾಗಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದು ಅಭ್ಯರ್ಥಿಯಾದರು. ತುಮಕೂರು ಲೋಕಸಭೆ ಯಾವತ್ತೂ ಕೂಡ ಜಿದ್ದಾಜಿದ್ದಿನ ಕಣವೇ ಆಗಿರುತ್ತದೆ. ಈ ಬಾರಿಯೂ ಕೂಡ ಅಂತದ್ದೇ ಚುನಾವಣೆ ನಡೆದಿದ್ದು ಯಾರಿಗೆ ಮತದಾರ ಮಣೆ ಹಾಕಿದ್ದಾನೆ ಎಂಬುದು ಕಾದು ನೋಡಬೇಕಾಗಿದೆ.ಈ ಬಾರಿ ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಅಷ್ಟೊಂದು ಉತ್ಸಾಹವೇನೂ ಕಾಣಲಿಲ್ಲ. ಕಳೆದ ಬಾರಿ ದೇವೇಗೌಡರು ಹಲವಾರು ಸಮುದಾಯಗಳ ಸಭೆಯನ್ನು ಮಾಡಿದ್ದರು. ಆದರೆ ಈ ಬಾರಿ ಸಮಾವೇಶಗಳು ನಡೆಯಲಿಲ್ಲ. ಕಡೆ ದಿನ ಮನೆ ಮನೆ ಪ್ರಚಾರ ಮಾಡಿದ್ದು ಬಿಟ್ಟರೆ ಬಹುತೇಕ ಪ್ರಚಾರ ಅಷ್ಟೊಂದು ಸದ್ದು ಮಾಡಿರಲಿಲ್ಲ. ಆರಂಭದಲ್ಲಿ ಟಿಕೆಟ್ ವಿಷಯವಾಗಿ ಒಂದಷ್ಟು ಅಸಮಾಧಾನವಿದ್ದರೂ ಬಳಿಕ ಎಲ್ಲವೂ ಸರಿಯಾಯಿತು. ಮುಖಂಡರು ಮನಸ್ತಾಪ ಮರೆತು ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಈಗ ಚುನಾವಣೆ ಮುಗಿದು ಒಂದು ತಿಂಗಳ ಕಾಲ ಜಿಲ್ಲೆಯನ್ನು ಸುತ್ತಾಡಿದ ಅಭ್ಯರ್ಥಿಗಳು ವಿಶ್ರಾಂತಿಯನ್ನು ಪಡೆದದ್ದೂ ಆಯ್ತು. ಇನ್ನು ಎಲ್ಲರ ಚಿತ್ತ ಫಲಿತಾಂಶದತ್ತ ಇದ್ದು ಜೂನ್ 4 ರವರೆಗೆ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರದಲ್ಲಿ ಭದ್ರವಾಗಿರುತ್ತದೆ.